

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮಹಾನಗರ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ವಂಚಿಸುತ್ತಿರುವ ಉದ್ಯಮಭಾಗದ ಎಲ್ಲ ಆಸ್ತಿಗಳ ಅಳತೆ ಮರು ಸರ್ವೇ ಆಗಬೇಕು. ಪಾಲಿಕೆ ಕಂದಾಯ ವಿಭಾಗದಲ್ಲಿನ ಮಹತ್ವದ ದಾಖಲೆ ಫೈಲ್‌ಗಳ ಕಳ್ಳತನ, ಅಕ್ರಮವಾಗಿ ಪಿಐಡಿ ಸಂಖ್ಯೆ ವಿತರಣೆ, ಜಾಹೀರಾತು ಆದಾಯದಲ್ಲಿ ವಂಚನೆ ಕುರಿತು ಲೋಕಾಯುಕ್ತ ಇಲ್ಲವೇ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖೆಗೆ ಠರಾವು ಕೈಗೊಳ್ಳಿ ಎಂಬ ಧ್ವನಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರಿಂದ ಕೇಳಿ ಬಂದಿತು.
ಇದೇ ವೇಳೆ ಜಾಹೀರಾತು ಗುತ್ತಿಗೆದಾರನ ಅಕ್ರಮ ಕುರಿತು ಕ್ರಮ ಕೈಗೊಳ್ಳದಿರುವುದು, ಅಕ್ರಮ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಅಧಿಕಾರಿಗಳ ವಿರುದ್ಧವೂ ಗುಡುಗಿದರು.
ಕ್ರಿಮಿನಲ್ ಕೇಸ್‌ಗೆ ಒತ್ತಾಯ: ಉದ್ಯಮಭಾಗದಲ್ಲಿನ ವೇಗಾ ಹೆಲ್ಮೆಟ್ ಕಂಪನಿಯು ವಾರ್ಷಿಕ ಲಕ್ಷಾಂತರ ರೂ. ತೆರಿಗೆ ವಂಚಿಸಿಕೊಂಡು ಬರುತ್ತಿದ್ದು, 4 ಕೋಟಿ ರೂ. ಅವ್ಯವಹಾರ ನಡೆದಿದೆ. ಕಂಪನಿಯು ಆಸ್ತಿಯ ಮರು ಅಳತೆ ನಡೆಸಿದ ಬಳಿಕ ಅಂದಾಜು 30 ಸಾವಿರ ಚದರ ಅಡಿ ವ್ಯತ್ಯಾಸ ಬಂದಿದೆ. ಅಲ್ಲದೇ, ಪಾಲಿಕೆ ಆಯುಕ್ತರ ಕೋರ್ಟ್‌ನಲ್ಲಿ 7.86 ಕೋಟಿ ರೂ. ತೆರಿಗೆ ಕಟ್ಟುವಂತೆ ಕಂಪನಿಗೆ ಸೂಚಿಸಿದೆ. ಹೀಗಾಗಿ ಉದ್ಯಮಭಾಗದಲ್ಲಿ ಇಂತಹ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಪಾಲಿಕೆಗೆ ತೆರಿಗೆ ಕಟ್ಟುವಲ್ಲಿ ವಂಚನೆ ಮಾಡುತ್ತಿವೆ. ಈ ಕುರಿತು ಎಲ್ಲ ಆಸ್ತಿಗಳ ಮರು ಅಳತೆ ಸಮೀಕ್ಷೆ ಆಗಬೇಕು. ಜತೆಗೆ ತೆರಿಗೆ ವಂಚನೆ ಮಾಡಿರುವ ಕಂಪನಿಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸದಸ್ಯರು ಒತ್ತಾಯಿಸಿದರು.
ಅಕ್ರಮದಲ್ಲಿ ಅಧಿಕಾರಿಗಳೇ ನೇರ ಭಾಗಿ: ಪಾಲಿಕೆ ಸಭಾನಾಯಕ ಹಣಮಂತ ಕೊಂಗಾಲಿ ಮಾತನಾಡಿ, ವೇಗಾ ಹೆಲ್ಮೆಟ್ ಕಂಪನಿ ತೆರಿಗೆ ವಂಚನೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೊದಲು 2 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್ ಕೊಟ್ಟಿದ್ದಾರೆ. ಸ್ವಲ್ಪ ದಿನಗಳ ಬಳಿಕ 4 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್ ನೀಡಿದ್ದಾರೆ. ಇದರಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ಆಗಿದೆ. ಇದೆಲ್ಲದರ ಕುರಿತು ಪರಿಶೀಲನೆ ನಡೆಸಿದ ಆಯುಕ್ತರ ಕೋರ್ಟ್ 7,86,660 ಕೋಟಿ ರೂ. ವ್ಯತ್ಯಾಸ ತೆರಿಗೆ ಕಟ್ಟುವಂತೆ ಸೂಚಿಸಿದೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ನೋಟಿಸ್ ಜಾರಿ: ಇದಕ್ಕೆ ಸ್ಪಂದಿಸಿದ ಆಯುಕ್ತೆ ಶುಭ.ಬಿ, ಈಗಾಗಲೇ ವೇಗಾ ಹೆಲ್ಮೆಟ್ ಕಂಪನಿಗೆ 7.86 ಕೋಟಿ ರೂ. ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಎಲ್ಲ ಆಸ್ತಿಗಳ ಮರು ಅಳತೆ ಮಾಡಿ ವ್ಯತ್ಯಾಸದ ತೆರಿಗೆ ಹಣ ವಸೂಲಿ ಮಾಡಲಾಗುವುದು. ಇದರಲ್ಲಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಉಪಮೇಯರ್ ವಾಣಿ ಜೋಶಿ, ಉಪ ಆಯುಕ್ತ ಉದಕುಮಾರ ತಳವಾರ, ಲಕ್ಷ್ಮಿ ನಿಪ್ಪಾಣಿಕರ, ರೇಷ್ಮಾ ತಾಳಿಕೋಟೆ, ಸದಸ್ಯರು ಇತರರಿದ್ದರು.
ಬೆಳಗಾವಿ ಮಹಾನಗರ ಪಾಲಿಕೆಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ನಷ್ಟ ಉಂಟು ಮಾಡಿರುವ, ಜಾಹೀರಾತು ಫಲಕಗಳ ಟೆಂಡರ್ ಅವಧಿ ಮುಗಿದಿದ್ದರೂ ಜಾಹೀರಾತು ಪ್ರದರ್ಶಿಸುತ್ತಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಿ. ಅಲ್ಲದೇ, ನಗರದಲ್ಲಿರುವ ಎಲ್ಲ ಜಾಹೀರಾತು ಫಲಕಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಮೇಯರ್ ಮಂಗೇಶ ಪವಾರ್ ಸೂಚಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಗೋಡ್ಸೆವಾಡಿಯಲ್ಲಿ ಸಿಂಗಲ್ ಬಡಾವಣೆಗೆ 14 ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ಅಕ್ರಮ ಪ್ರಕರಣದಲ್ಲಿ ಅಧಿಕಾರಿ, ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ಆಸ್ತಿಗೆ ಸಂಬಂಧಪಟ್ಟ ದಾಖಲೆ ನಾಪತ್ತೆಯಾಗಿರುವ ಹಿನ್ನೆಲೆ ಅಕ್ರಮ ಎಸಗಿರುವ ನೌಕರರು ತಪ್ಪು ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ. ಇದರಲ್ಲಿ ಒಬ್ಬರನ್ನು ಒಬ್ಬರು ರಕ್ಷಿಸುವ ಕೆಲಸ ನಡೆಯುತ್ತಿದೆ. ಕಂದಾಯ ವಿಭಾಗದ ಆಯುಕ್ತರ ಅಧೀನದಲ್ಲಿಯೇ ಎಲ್ಲ ವ್ಯವಹಾರಗಳು ನಡೆಯುತ್ತಿವೆ ಎಂದು ಸದಸ್ಯರು ದೂರಿದರು. ಇದಕ್ಕೆ ಸ್ಪಂದಿಸಿದ ಮೇಯರ್ ಗೋಡ್ಸೆವಾಡಿಯಲ್ಲಿ ಸಿಂಗಲ್ ಬಡಾವಣೆಗೆ 14 ಆಸ್ತಿ ಗುರುತಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಕಂದಾಯ ವಿಭಾಗದಲ್ಲಿ ಪದೇಪದೇ ದಾಖಲೆಗಳು ಕಳ್ಳತನ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಕೇಸ್ ದಾಖಲಿಸಿ ೈಲ್‌ಗಳ ಪತ್ತೆ ಹಚ್ಚುವ ಕೆಲಸ ಮಾಡಲಾಗುವುದು. ಇನ್ನು ಮುಂದೆ ಫೈಲ್‌ಗಳ ಸಂರಕ್ಷಣೆ ಇ-ಆಡಳಿತ, ಡಿಜಿಟಲ್ ಲಾಕರ್ ಹಾಗೂ ಪ್ರತಿಯೊಂದು ದಾಖಲೆ ಸ್ಕಾೃನಿಂಗ್ ಮಾಡಲು ಸೂಚಿಸಲಾಗಿದೆ. ದಾಖಲೆಗಳ ಸಂಗ್ರಹ ವಿಶೇಷ ಕ್ರಮ ವಹಿಸಲಾಗಿದೆ ಎಂದು ಆಯುಕ್ತೆ ಶುಭ. ಬಿ ಸಭೆಗೆ ಭರವಸೆ ನೀಡಿದರು.
ಮಹಾನಗರ ಪಾಲಿಕೆಯ ಪರಿಷತ್‌ಗಿಂತ ಜಾಹೀರಾತು ಗುತ್ತಿಗೆದಾರ ದೊಡ್ಡವನಲ್ಲ. ತಪ್ಪು ಮಾಡಿರುವ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಹಿಂದೇಟು?. ಶಾಸಕರು, ಪಾಲಿಕೆ ಸದಸ್ಯರನ್ನು ಖರೀದಿಸಿದ್ದಾರೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡು ಗುತ್ತಿಗೆದಾರರ ಓಡಾಡುತ್ತಿದ್ದಾನೆ. ಇದು ನನ್ನ ಸ್ವಾಭಿಮಾನಕ್ಕೆ ದಕ್ಕೆ ಉಂಟು ಮಾಡಿದ್ದಾರೆ. ನಾನು ಸುಮ್ಮನೆ ಬಿಡುವುದಿಲ್ಲ ಎಂದು ಶಾಸಕ ಅಭಯ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಗೆ ತೆರಿಗೆ ವಂಚನೆಯಾಗಿರುವ ಕುರಿತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ತನಿಖೆಗೆ ವಹಿಸಿ ಇಲ್ಲವೇ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ. ಲೋಕಾಯುಕ್ತ ತನಿಖೆ ಬೇಡ. ಆಸ್ೀ ಸೇಠ್, ಶಾಸಕ ಪಾಲಿಕೆಯಲ್ಲಿ ಪ್ರಮುಖ ವಿಷಯಗಳು ಪಾಲಿಕೆ ಆಡಳಿತಾರೂಢ ಪಕ್ಷದ ಸಭಾನಾಯಕನಾಗಿ ಹಣಮಂತ ಕೊಂಗಾಲಿ ಆಯ್ಕೆ. ಪಾಲಿಕೆಯ ಮಾಜಿ ಸದಸ್ಯ, ಕಾಶ್ಮೀರದಲ್ಲಿ ಉಗ್ರರ ಗುಂಡಿ ದಾಳಿಗೆ ಮೃತಪಟ್ಟ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಕೆ. ಪಾಲಿಕೆಯಲ್ಲಿ ಏಜೆಂಟರ್ ಹಾವಳಿ ತಡೆಗಟ್ಟಲು ಸದಸ್ಯರು ಒತ್ತಾಯ ಪಾಲಿಕೆ ಎಸ್‌ಸಿ, ಎಸ್‌ಟಿ ಅನುದಾನ ಹಂಚಿಕೆಯಲ್ಲಿ ತಾರತಮ್ಯಕ್ಕೆ ಆಕ್ರೋಶ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಅಕ್ರಮ ತಡೆಗೆ ಒತ್ತಾಯ.