

ಕೂಡ್ಲಿಗಿ: ಬೆಳಗಾವಿಯಲ್ಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮೂಲಕ ರಾಜ್ಯಪಾಲಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಸುವರ್ಣಸೌಧದ ಬಳಿ ಮಂಗಳವಾರ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಸಮಾಜದ ಸಾವಿರಾರು ಜನರು ಹೋರಾಟ ಕೈಗೊಂಡಿದ್ದಾರೆ. ಈ ವೇಳೆ ಸಚಿವರು, ಶಾಸಕರ ಮಾತುಕತೆಗೆ ಅವಕಾಶ ನೀಡದೆ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ದರ್ಪ ಪ್ರದರ್ಶಿಸಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಹೋರಾಟವನ್ನು ಹತ್ತಿಕ್ಕಲು ಸಮುದಾಯದ ವಕೀಲರು, ರೈತರ ವಿರುದ್ಧ ದಾಖಲಿಸಿರುವ ಕೇಸ್ ವಾಪಸ್ ಪಡೆಯಬೇಕು. ಎಡಿಜಿಪಿ ಆರ್. ಹಿತೇಂದ್ರ ಅವರನ್ನು ಅಮಾನತು ಮಾಡಬೇಕು. ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಸಿಎಂ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಸಮಾಜ ಒಗ್ಗಟ್ಟಾಗಿ ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮಾಜದ ಪ್ರಮುಖರಾದ ಟಿ.ಜಿ.ನಾಗರಾಜ ಗೌಡ, ಗಿರೀಶ್, ಮರುಳಸಿದ್ದಪ್ಪ, ಖಾನಾವಳಿ ಕೊಟ್ರೇಶ, ಪಿ.ರಜನಿಕಾಂತ, ಅಮಲಾಪುರ ಶರಣಪ್ಪ, ಲಕ್ಷ್ಮೀ ದೇವಿ, ರೇಖಾ ಮಲ್ಲಿಕಾರ್ಜುನ, ನಂದಿ ಬಸವರಾಜ, ಜಿ.ಆರ್. ಸಿದ್ದೇಶ, ಎರ‌್ರಿಸ್ವಾಮಿ, ಚಿನ್ನಾಪ್ರಪ್ಪ, ತುಪ್ಪಳ್ಳಿ ಮೂಗಣ್ಣ ಇತರರಿದ್ದರು.