ಬೆಳಗಾವಿ ಹೆದ್ದಾರಿಯಲ್ಲಿ ಕನ್ನಡ ಕಹಳೆ: ಕರವೇ ಕಾರ್ಯಕರ್ತರನ್ನ ತಡೆದ ಪೊಲೀಸರ ವಿರುದ್ಧ ಆಕ್ರೋಶ

karave kannada belagavi
Published on

ಬೆಳಗಾವಿ: ಕುಂದಾನಗರಿಯಲ್ಲಿ ಕನ್ನಡ ಧ್ವಜ ಹಿಡಿದು ಕುಣಿದ ವಿದ್ಯಾರ್ಥಿ ಮೇಲೆ ಹಲ್ಲೆ, ಪೊಲೀಸರಿಂದ ನಡೆದ ದೌರ್ಜನ್ಯ ಖಂಡಿಸಿ ಹಾಗೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಮಂಗಳವಾರ ಆಕ್ರೋಶ ಹೊರಹಾಕುತ್ತಲೇ ಕನ್ನಡ ಕಹಳೆ ಮೊಳಗಿಸಿದರು.

ಧಾರವಾಡದಿಂದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ "ನೂರು ವಾಹನ ಸಾವಿರ ಕನ್ನಡ ಧ್ವಜ'' ಘೋಷ ವಾಕ್ಯದೊಂದಿಗೆ ಬೆಳಗಾವಿಗೆ ಮಂಗಳವಾರ ಹೊರಟಿದ್ದ ಕಾರ್ಯಕರ್ತರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್​ನಲ್ಲಿ ಪೊಲೀಸರು ತಡೆದರು. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕರವೇ ಕಾರ್ಯಕರ್ತರು ಲಾರಿ, ಬಸ್ಸುಗಳ ಮೇಲೇರಿ ಬೃಹತ್​ ಕನ್ನಡ ಬಾವುಟ ಪ್ರದರ್ಶಿಸಿದರು. ಮಹಾರಾಷ್ಟ್ರ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ ಕರವೇ ಕಾರ್ಯಕರ್ತರು ನಡುರಸ್ತೆಯಲ್ಲಿ ವಾಹನಗಳ ಕೆಳಗೆ ಮಲಗಿ ವಾಹನ ಸಂಚಾರ ತಡೆದರು. ಪರಿಣಾಮ ಎರಡು ಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಎಂಇಎಸ್​ಗೆ ಮಹಾಮೇಳಾವ್​ ನಡೆಸಲು ಅವಕಾಶ ಕೊಡುವ ಸರ್ಕಾರವು ನಾಡು-ನುಡಿ ಬಗ್ಗೆ ಹೋರಾಟ ಮಾಡುವ ಕರವೇ ಕಾರ್ಯಕರ್ತರಿಗೆ ಬೆಳಗಾವಿಗೆ ಹೋಗಲು ಅವಕಾಶ ನೀಡದಿರುವುದು ದುರಂತ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣಗೌಡ ಆಕ್ರೋಶ ಹೊರ ಹಾಕಿದರು.

ಅತ್ತ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಭೇಟಿಗೆ ನಿರ್ಧರಿಸಿದ್ದ ಮಹಾ ಸಚಿವರ ಪ್ರವೇಶ ರ್ನಿಬಂಧಿಸಿದ್ದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಎಂಇಎಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರನ್ನ ಪೊಲೀಸರು ವಶಕ್ಕೆ ಪಡೆದು, ಬಿಟ್ಟು ಕಳುಹಿಸಿದ್ದಾರೆ.

ಬೆಳಗಾವಿ ಪೊಲೀಸ್​ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಡಿಸಿಪಿಗಳಾದ ಡಿಸಿಪಿ ರವೀಂದ್ರ ಗಡಾದೆ, ಪಿ.ವಿ.ಸ್ನೇಹಾ ನೇತೃತ್ವದಲ್ಲಿ 11 ಕೆಎಸ್​ಆರ್​ಪಿ ತುಕಡಿ ಸೇರಿ 300 ಅಧಿಕ ಪೊಲೀಸ್​ ಬಂದೋಬಸ್ತ್​ ಕಲ್ಪಿಸಿದ್ದರು.

ಅತ್ತ ಕರವೇ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ, ಮಹಾರಾಷ್ಟ್ರ ಮುಖಂಡರು ಬೆಳಗಾವಿಗೆ ಭೇಟಿ ನೀಡುವ ನಿರ್ಧಾರವನ್ನ ಕೈಬಿಟ್ಟರು. ಮಹಾರಾಷ್ಟ್ರದಲ್ಲಿ ಮಾತನಾಡಿದ ಮಹಾರಾಷ್ಟ್ರ ಸಚಿವ ಶಂಭುರಾಜೆ ದೇಸಾಯಿ ಮಾತನಾಡಿ, ನಮ್ಮ ಮಹಾರಾಷ್ಟ್ರ ನಾಯಕರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಸೂಚನೆ ನೀಡಿದರೆ ಮಾತ್ರ ಬೆಳಗಾವಿಗೆ ಹೋಗುತ್ತೇವೆ. ಮಂಗಳವಾರ ಡಾ.ಅಂಬೇಡ್ಕರ್​ ಮಹಾಪರಿನಿರ್ವಾಣ ದಿನ ಇದೆ. ಹೀಗಾಗಿ ನಾವು ಬೆಳಗಾವಿಗೆ ಹೋಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net