ಬೇಲೇನಹಳ್ಳಿ ಪಿಎಸಿಎಸ್‌ಗೆ 2.35 ಲಕ್ಷ ರೂ. ನಿವ್ವಳ ಲಾಭ

TKE 2 (PACS)
Published on

ತರೀಕೆರೆ: ಬೇಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2.35 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಬಿ.ಎನ್.ಚಿದಾನಂದ್ ಹೇಳಿದರು. ಬೇಲೇನಹಳ್ಳಿಯ ಶ್ರೀ ಬೂದಿ ಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸಂಘದಲ್ಲಿ ಒಟ್ಟು 901 ಜನ ಸದಸ್ಯರಿದ್ದು, 230 ಸದಸ್ಯರಿಗೆ ಕೆಸಿಸಿ ಹಾಗೂ ಹೈನೋದ್ಯಮಕ್ಕೆ 3.18 ಕೋಟಿ ರೂ.ಸಾಲ ನೀಡಲಾಗಿದೆ ಎಂದರು.

ಒಟ್ಟು 38.98 ಲಕ್ಷ ರೂ.ಷೇರು ಬಂಡವಾಳ ಸಂಗ್ರಹಿಸಿದ್ದು, ಈವರೆಗೆ ಹಾದಿಕೆರೆ ಪಿಎಸಿಎಸ್ ವ್ಯಾಪ್ತಿಯಲ್ಲಿದ್ದ ಇಟ್ಟಿಗೆ, ಎ ಮತ್ತು ಬಿ.ರಾಮನಹಳ್ಳಿ, ಎ.ರಂಗಾಪುರ ಗ್ರಾಮದ ಷೇರುದಾರರು ಇದೀಗ ಬೇಲೇನಹಳ್ಳಿ ಪಿಎಸಿಎಸ್‌ಗೆ ಸೇರ್ಪಡೆಗೊಂಡಿರುವುದರಿಂದ ಮತ್ತಷ್ಟು ಷೇರು ಸಂಗ್ರಹವಾಗುವ ಜತೆಗೆ ಸಂಘ ಪ್ರಗತಿ ಹೊಂದಲಿದೆ ಎಂದು ಹೇಳಿದರು.

ಸಂಘ ಸ್ವಂತ ಕಟ್ಟಡದ ಜತೆ 35 ಲಕ್ಷ ರೂ ಸ್ಥಿರಾಸ್ತಿ ಹೊಂದಿದ್ದು, ಗೊಬ್ಬರ ಮಾರಾಟ, ಪಡಿತರ ವಿತರಣೆ ಮೂಲಕ ಆದಾಯ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ವಾಹನ ಸಾಲ, ವೈಯಕ್ತಿಕ ಸಾಲ ಮಾತ್ರವಲ್ಲ, ಪಿಗ್ಮಿ ಸಂಗ್ರಹಕ್ಕೆ ಸಿಬ್ಬಂದಿ ನಿಯೋಜಿಸಿ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.

ಉಪಾಧ್ಯಕ್ಷ ಬಿ.ಎನ್.ದೇವೇಂದ್ರಪ್ಪ, ನಿರ್ದೇಶಕರಾದ ಬಿ.ಸುರೇಶ್, ಎಚ್.ಎನ್.ರುದ್ರಪ್ಪ, ಎನ್.ಸಿ.ಮಹೇಂದ್ರ, ಆರ್.ಎನ್.ಪ್ರಸನ್ನ, ಬಿ.ಆರ್.ವಸಂತ, ರಾಜಪ್ಪ, ಶಿವಮ್ಮ, ಬಿ.ಎಂ.ವಿಜಯಕುಮಾರ್, ಸಿ.ಆರ್.ಮಲ್ಲಪ್ಪ, ಸಿಇಒ ಬಿ.ಎಸ್.ನಂಜುಂಡಸ್ವಾಮಿ, ಮಾರಾಟ ಗುಮಾಸ್ತ ಬಿ.ಎಸ್.ಮುರುಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net