

ಪುತ್ತೂರು: ಬೆಳೆ ವಿಮೆಯಲ್ಲಿ ನೊಂದಾಯಿತ ಬೆಳೆ ಸಮೀಕ್ಷೆಯನ್ನು ತಾವೇ ಖುದ್ದಾಗಿ ಅಥವಾ ಬೆಳೆ ಸಮೀಕ್ಷೆ ಕೈಗೊಳ್ಳಲು ಗ್ರಾಮಕ್ಕೆ ನಿಯೋಜಿತರಾಗಿರುವ ಖಾಸಗಿ ನಿವಾಸಿಗಳ ಮುಖಾಂತರ ಸೆಪ್ಟೆಂಬರ್ 15 ನೇ ತಾರೀಖಿನೊಳಗೆ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಕೈಗೊಂಡು ವಿಮೆ ಮಾಡಿಸಿರುವ ಬೆಳೆಯನ್ನು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಳ್ಳಲು ತಾಲೂಕು ತೋಟಗಾರಿಕೆ ಇಲಾಖೆ ತಿಳಿಸಿದೆ.
ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2023-24 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ.
ಈ ಸಾಲಿನಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಲು ಬೆಳೆ ವಿಮೆ ಮಾಡಿಸಲಾಗುವ ಬೆಳೆಯು ರೈತರ ಸರ್ವೇ ನಂಬರ್ ನಲ್ಲಿ ಬೆಳೆ ಸಮೀಕ್ಷೆಯಡಿ ನಮೂದಾಗಿರುವುದು ಕಡ್ಡಾಯಗೊಳಿಸಲಾಗಿರುತ್ತದೆ. ಬೆಳೆ ಸಮೀಕ್ಷೆಯಡಿ ವಿಮೆ ಮಾಡಿಸಲಾಗುವ ಬೆಳೆಯು ನಮೂದಾಗದಿದ್ದ ಪಕ್ಷದಲ್ಲಿ, ಸೆಪ್ಟೆಂಬರ್ 15 ನೇ ತಾರೀಖಿನೊಳಗೆ ಬೆಳೆ ಸಮೀಕ್ಷೆ ಮಾಡಿ ಬೆಳೆ ನಮೂದಿಸಲಾಗುವುದೆಂದು ರೈತರಿಂದ ಮುಚ್ಚಳಿಕೆ ಪಡೆದು ಈ ಯೋಜನೆಯಡಿ ರೈತರನ್ನು ನೋಂದಾಯಿಸಲಾಗಿರುತ್ತದೆ. ತಪ್ಪಿದಲ್ಲಿ ಅಂತಹ ರೈತರ ನೋಂದಾವಣೆಯು ತಿರಸ್ಕೃತವಾಗುತ್ತದೆ.