

ಸವಣೂರ:ಪಟ್ಟಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಬೆಳವಟ್ಟಿಯ ಶ್ರೀಲಕ್ಷ್ಮೀದೇವಿ ಪ್ರಸನ್ನ ಜೋಡಿ ಎತ್ತು ಪ್ರಥಮ ಸ್ಥಾನದೊಂದಿಗೆ ಹೀರೋ ಬೈಕ್ ಬಹುಮಾನ ತನ್ನದಾಗಿಸಿಕೊಂಡಿತು.
ಮಾಲಾಪುರ-ಕರಡಿಕೊಪ್ಪದ ದುರ್ಗಾದೇವಿ ಪ್ರಸನ್ನ ಜೋಡಿ ಎತ್ತು ದ್ವಿತೀಯ ಸ್ಥಾನ(43 ಸಾವಿರ ರೂ. ನಗದು), ಬೆಳಗಾವಿಯ ಶ್ರೀ ಆಂಜನೇಯ ಪ್ರಸನ್ನ ಜೋಡಿ ಎತ್ತು ತೃತೀಯ ಸ್ಥಾನ (33 ಸಾವಿರ ರೂ. ನಗದು) ಪಡೆದವು. ವಿವಿಧ ಜಿಲ್ಲೆಯಿಂದ ಆಗಮಿಸಿದ ಸುಮಾರು 47 ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.
ಹುರಳೀಕುಪ್ಪಿ ರಸ್ತೆಗೆ ಹೊಂದಿಕೊಂಡಿರುವ ಆಶೋಕ ದೇಸಾಯಿ ಹಾಗೂ ರಾಜು ಗರಗದ ಕುಟುಂಬಸ್ಥರ ಜಮೀನಿನಲ್ಲಿ ಶ್ರೀ ಮೂಕ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ಪರ್ಧೆಗೆ ವರ್ತಕ ಮಹಾಂತೇಶ ಮೆಣಸಿನಕಾಯಿ ಹಾಗೂ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಯರೇಸಿಮಿ ಚಾಲನೆ ನೀಡಿದರು.
‘ಯುವಕರು ಕೃಷಿ ಪ್ರಧಾನ ಚಟುವಟಿಗಳಲ್ಲಿ ಹೆಚ್ಚು ಪಾಲ್ಗೊಂಡಲ್ಲಿ ಮಾತ್ರ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ಮೂಡುತ್ತದೆ. ವರ್ಷವಿಡಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತ ಸಮೂಹ ಬವಣೆ ಮರೆತು ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸುವ ಸದುದ್ದೇಶ ಹಾಗೂ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಈ ದಿನಮಾನಗಳಲ್ಲಿ ಮುಂದಿನ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗಾಡಾ ಸ್ಪರ್ಧೆ ಏರ್ಪಡಿಸಲಾಗಿದೆ' ಎಂದರು.
ಪ್ರಮುಖರಾದ ಮಲ್ಲಾರಪ್ಪ ತಳ್ಳಿಹಳ್ಳಿ, ಹನಮಂತಗೌಡ ಮುದಿಗೌಡ್ರ, ಗಣೇಶ ಗಾಣಿಗೇರ, ನೀಲಪ್ಪಗೌಡ ಹಿತ್ತಲಮನಿ, ಮಲ್ಲಿಕಾರ್ಜುನ ವಿಜಾಪುರ, ಗಂಗಾಧರ ಬಾಣದ, ಉಮೇಶ ಕಳಕಪ್ಪನವರ, ದರಿಯಪ್ಪಗೌಡ ಪಾಟೀಲ, ಸಮಿತಿ ಪದಾಧಿಕಾರಿಗಳಾದ ವಿನಾಯಕ ಕುಲಕರ್ಣಿ, ಸಂತೋಶಗೌಡ ಕೆಂಚನಗೌಡ್ರ, ಕಿಶನ್ ಉಪ್ಪಾರ, ಮಹೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ವಿನಾಯಕ ಕರಿಯಪ್ಪಗೌಡ್ರ, ವೀರಣ್ಣ ಶಿಗ್ಗಾಂವಿ, ಪ್ರವೀಣ ರಾಗಿ, ಮಂಜು ಕಾಳಶೆಟ್ಟಿ, ಅಜಿತ್ ಗಾಣಿಗೇರ, ಸಂತೋಷ ಗಾಡದ, ನವೀನ ಗಡ್ಡಿಯವರ, ಭರಮಗೌಡ ಪಾಟೀಲ, ಪ್ರಕಾಶಗೌಡ ಮುದಿಗೌಡ್ರ, ವಿರೇಶ ರಾಯನಾಳ ಇತರರಿದ್ದರು.