ಬೆಳಪುವಿನಲ್ಲಿ ದೋಣಿ ವಿಹಾರ, ಬೋಟಿಂಗ್ ಕೇಂದ್ರವಾಗಿ ಜಾರಂದಾಯ ಕೆರೆ ಅಭಿವೃದ್ಧಿ

Belapu kere
Published on

ಪಡುಬಿದ್ರಿ: ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಬೆಳಪು ಗ್ರಾಮ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲೂ ಪ್ರಗತಿ ಪಥದಲ್ಲಿದ್ದು, ಪ್ರಸ್ತುತ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸುಮಾರು 3 ಎಕ್ರೆ ಪ್ರದೇಶದಲ್ಲಿ ವಿಶಾಲವಾಗಿ ಹಬ್ಬಿಕೊಂಡಿರುವ ಇಲ್ಲಿನ ಪುರಾತನ ಮತ್ತು ಇತಿಹಾಸ ಪ್ರಸಿದ್ಧವಾಗಿರುವ ಬೆಳಪು ಜಾರಂದಾಯ ಕೆರೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ಸಾಗುತ್ತಿವೆ.

4 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಈಗ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆ ಪರಿವರ್ತಿಸಿಕೊಂಡು ಮಂಗಳೂರಿನ ಪ್ರಿಯಾ ಇನ್‌ಲ್ಯಾಂಡ್ ಫಿಶರಿಸ್ ಮತ್ತು ಬೋಟ್ ಸ್ಪೋರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಬೋಟಿಂಗ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಇದು ಕಾಪು ತಾಲೂಕಿನ ಪ್ರಥಮ ಬೋಟಿಂಗ್ ಪಾಯಿಂಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಳೂರಿನಿಂದ 1 ಕಿ.ಮೀ. ಅಂತರದಲ್ಲಿ ಸಾಗಿದರೆ ಆಕರ್ಷಣೀಯವಾಗಿರುವ ಅತೀ ಪುರಾತನ ಎತ್ತರದ ಬಂಡೆ ಕಲ್ಲು ಕಾಣಸಿಗುತ್ತದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿದರೆ ಬೆಳಪು ಜಾರಂದಾಯ ಕೆರೆ ಕಾಣಸಿಗುತ್ತದೆ. ವಾಹನಗಳಲ್ಲಿ ತೆರಳುವವರು ಬೆಳಪು ಭಜನಾ ಮಂದಿರದ ಬಳಿಯಿಂದ ರಸ್ತೆಯಲ್ಲಿ ಸಾಗಿ ಜಾರಂದಾಯ ಬೋಟಿಂಗ್ ಪಾಯಿಂಟ್ ತಲುಪಬಹುದು.

ಬೋಟಿಂಗ್‌ಗೆ ಸಮಯ ನಿಗದಿ: ಮೋಟಾರ್ ಬೋಟಿಂಗ್‌ಗೆ ಬರುವ 8 ಜನರಿಗೆ ರಿಯಾಯಿತಿ ದರ 200 ರೂ., 5 ಜನರ ತಂಡಕ್ಕೆ 150 ರೂ., ಇಬ್ಬರು ನಡೆಸುವ ಪೆಡಲ್ ಬೋಟಿಂಗ್‌ಗೆ 100 ರೂ. ನಿಗದಿಪಡಿಸಲಾಗಿದೆ. ಭಾನುವಾರ ಮತ್ತು ರಜಾದಿನಗಳಲ್ಲಿ ಬೆಳಗ್ಗೆ 8ರಿಂದ ಸಾಯಂಕಾಲ 6ರವರೆಗೆ ಹಾಗೂ ವಾರದ ಇತರ ದಿನಗಳಲ್ಲಿ ಸಾಯಂಕಾಲ 4ರಿಂದ 6ರವರೆಗೆ ಬೋಟಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ. ವಾರದ ಹಿಂದೆ ಬೋಟಿಂಗ್ ಆರಂಭವಾಗಿದ್ದು, ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.

15 ಲಕ್ಷ ರೂ. ವೆಚ್ಚದ ಯೋಜನೆ: ಜಾರಂದಾಯ ಬೋಟಿಂಗ್ ಪಾಯಿಂಟ್ ಪ್ರದೇಶವನ್ನು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಹಟ್ ನಿರ್ಮಾಣ ಮತ್ತು ಪ್ರವಾಸಿಗರಿಗೆ ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಕೆರೆಯಲ್ಲಿ ತುಳುನಾಡಿನಲ್ಲಿ ಪ್ರಕೃತಿದತ್ತವಾಗಿ ಕಾಣಸಿಗುವ ವಿವಿಧ ಜಾತಿಯ ಸಾವಿರಾರು ಮೀನುಗಳಿವೆ. ಅದರೊಂದಿಗೆ ಸಿಹಿ ನೀರಿನಲ್ಲಿ ಬದುಕುವ ಕಾಮನ್ ಕಾರ್ಪ್, ಸಿಲ್ವರ್ ಕಾರ್ಪ್, ರೋಹು, ಕಾಟ್ಲ, ಗಪ್ಪೀಸ್ ಜಾತಿಯ ಸುಮಾರು 40 ಸಾವಿರದಷ್ಟು ಮೀನುಗಳನ್ನು ಕೆರೆಗೆ ಬಿಡಲಾಗಿದೆ. ಈ ಮೂಲಕ ಕೆರೆಯ ನೀರಿನ ಶುಚಿತ್ವ, ಅದರೊಂದಿಗೆ ಸರ್ಕಾರಿ ಮೀನುಗಳ ಸಂತಾನಾಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ.

ಸುತ್ತಮುತ್ತಲಿನ ಎಲ್ಲ ಪ್ರದೇಶಗಳ ಸೌಂದರ್ಯ ಆಸ್ವಾದನೆಗೆ ಇಲ್ಲಿನ ಬಂಡೆಯ ಮೇಲೆ ವೀಕ್ಷಣ ಗೋಪುರ ನಿರ್ಮಾಣ, ಕೆರೆ ಬಳಿ ಡ್ಯಾನ್ಸಿಂಗ್ ಲೈಟ್‌ಗಳನ್ನು ಅಳವಡಿಸಲಾಗುವುದು. ಬೋಟಿಂಗ್ ಪಾಯಿಂಟ್‌ನಲ್ಲಿ ಶಾಲಾ ಮಕ್ಕಳಿಗೆ ರಿಯಾಯತಿ ದರದಲ್ಲಿ ಬೋಟಿಂಗ್ ವ್ಯವಸ್ಥೆ, ಜಲ ಕ್ರೀಡೆ, ನದಿ ದಾಟುವಿಕೆ, ಆಟೋಟಗಳಿಗೆ, ಈಜು ಕಲಿಕೆಗೆ ಅವಕಾಶ ಕಲ್ಪಿಸುವುದು, ಕೆರೆಯ ದಡ ಭಾಗದಲ್ಲಿ ಸಾರ್ವಜನಿಕ ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳ ಸ್ಥಾಪನೆ, ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜನೆಗೆ ಚಿಂತಿಸಲಾಗಿದೆ. ಕಾಪು ಪುರಸಭೆ ವ್ಯಾಪ್ತಿಗೊಳಪಟ್ಟಿರುವ ಇಲ್ಲಿನ ಸಂಪರ್ಕ ರಸ್ತೆ ಅಭಿವೃದ್ಧಿಗೆ ಪುರಸಭೆ ಮುಖ್ಯಾಧಿಕಾರಿಯವರಲ್ಲಿ ಮಾತುಕತೆ ನಡೆಸಲಾಗಿದೆ. ಕೆರೆಯ ಸುತ್ತ ಸೋಲಾರ್ ದೀಪ ಅಳವಡಿಕೆ. ಪ್ರವಾಸಿಗರ ಅನುಕೂಲಕ್ಕಾಗಿ ಶೌಚಗೃಹ ಮತ್ತು ಸ್ನಾನಗೃಹದ ನಿರ್ಮಾಣ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ತರಲಾಗಿದೆ. -ದೇವಿಪ್ರಸಾದ್ ಶೆಟ್ಟಿ, ಬೆಳಪು ಗ್ರಾಪಂ ಅಧ್ಯಕ್ಷ ಬೋಟಿಂಗ್ ಪಾಯಿಂಟ್‌ನಲ್ಲಿ ಈಗಾಗಲೇ 5 ಮಾದರಿಯ ಬೋಟ್‌ಗಳನ್ನು ಸಾರ್ವಜನಿಕರ ಸೇವೆಗಾಗಿ ಒದಗಿಸಲಾಗಿದೆ. 2 ಪೆಡೆಲ್ ಬೋಟ್ (ಗರಿಷ್ಠ ಇಬ್ಬರು), 1 ರೋಬೋಟ್ (ಗರಿಷ್ಠ 5 ಮಂದಿ), 1 ಮೋಟಾರ್ ಬೋಟ್ (ಗರಿಷ್ಠ 8 ಮಂದಿ) ಇಲ್ಲಿ ಪ್ರವಾಸಿಗರಿಗಾಗಿ ಲಭ್ಯವಿದೆ. ಅಲ್ಲದೆ ಓರ್ವ ಸಂಚರಿಸುವ ಪೆಡಲ್ ಸೈಕಲ್ ಕೂಡ ಸೇವೆಗೆ ಇರಿಸಲಾಗುವುದು. ಇಲ್ಲಿನ ಬಂಡೆಗಳಲ್ಲಿ 3ಡಿ ಪರಿಣಾಮ ಬೀರುವ ಡೈನೊಸಾರ್‌ನಂತಹ ಕಲಾಕೃತಿಗಳನ್ನು ಶ್ರೇಷ್ಠ ಕಲಾವಿದರ ಮೂಲಕ ರಚಿಸಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. -ಡಾ. ಎಂ.ಸ್. ನಝೀರ್, ಪ್ರಿಯಾ ಇನ್‌ಲ್ಯಾಂಡ್ ಫಿಶರೀಶ್ ಮತ್ತು ಬೋಟ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net