ಸ್ಮಶಾನ ದಾರಿಗಾಗಿ ಬೆಳಕೇರಿ ಗ್ರಾಮಸ್ಥರಿಂದ ಪ್ರತಿಭಟನೆ

BYD BELAKERI
Published on

ಬ್ಯಾಡಗಿ: ಸ್ಮಶಾನಕ್ಕೆ ದಾರಿ ವ್ಯವಸ್ಥೆ ಕಲ್ಪಿಸದ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ತಾಲೂಕಿನ ಬೆಳಕೇರಿ ಗ್ರಾಮಸ್ಥರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಸದಸ್ಯ ದ್ಯಾಮನಗೌಡ್ರ ಪೂಜಾರ ಮಾತನಾಡಿ, ಗ್ರಾಮದ ರಿ.ಸ.ನಂ. 90ರಲ್ಲಿ 20 ಗುಂಟೆ ಸ್ಮಶಾನ ಭೂಮಿ ಎಂದು ದಾಖಲೆಯಲ್ಲಿದೆ. ಹಲವು ದಶಕಗಳಿಂದ ಸ್ಮಶಾನಕ್ಕೆ ಸ.ನಂ. 40ರ ದಕ್ಷಿಣ ಭಾಗದಲ್ಲಿ ಗ್ರಾಮಸ್ಥರು ಹೋಗಿ ಬರುತ್ತಿದ್ದರು. ಆದರೆ, ಈಗ ಏಕಾಏಕಿ ಆ ಜಮೀನು ಮಾಲೀಕರು ನಮ್ಮ ಹೊಲದಲ್ಲಿ ದಾರಿ ಇರುವುದಿಲ್ಲ, ಸ್ಮಶಾನಕ್ಕೆ ನಕಾಶೆಯಲ್ಲಿ ಎಲ್ಲಿ ದಾರಿಯಿದೆಯೋ ಆ ಜಾಗದಲ್ಲಿ ಓಡಾಡುವಂತೆ ತಕರಾರು ತೆಗೆದ ಪರಿಣಾಮ, ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಾಗಿದೆ ಎಂದರು.

ತಾಲೂಕಿನ ಬೆಳಕೇರಿ ಗ್ರಾಮದ ಸ್ಮಶಾನಕ್ಕೆ ಶವ ಸಂಸ್ಕಾರಕ್ಕಾಗಿ ಹೋಗಿ ಬರಲು ಸೂಕ್ತ ರಸ್ತೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಹೋಗಲಾಡಿಸುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರೂ ಈವರೆಗೂ ಮುಕ್ತಿ ಸಿಕ್ಕಿಲ್ಲ ಎಂದು ಆರೋಪಿಸಿದರು.

ನಾಲ್ಕಾರು ದಿನಗಳ ಹಿಂದೆ ಯುವಕನ ಶವಸಂಸ್ಕಾರಕ್ಕೆ ತೆರಳಲು ಗ್ರಾಮಸ್ಥರು ಸೇರಿದಂತೆ ಪರ ಊರಿನವರು ಆಗಮಿಸಿದ್ದರು. ಆದರೆ, ಹಲವರು ದಾರಿಯಿಲ್ಲದೆ ಶವಸಂಸ್ಕಾರ ಮಾಡದೇ ಹಾಗೆಯೇ ವಾಪಸ್ ಆದರು. ಬಹುತೇಕರು ದಾರಿ ಸಮಸ್ಯೆ ಅರಿತು ಮನೆಯಲ್ಲೇ ಶವಕ್ಕೆ ಹೂಮಾಲೆ ಹಾಕಿ, ಮಣ್ಣಿನ ಸಂಸ್ಕಾರಕ್ಕೆ ಬಾರದೆ, ಮರಳಿದ ಘಟನೆಗಳು ನಡೆದಿವೆ ಎಂದರು.

ಪಂಚಾಯಿತಿ ಠರಾವಿಗಿಲ್ಲ ಕಿಮ್ಮತ್ತು

ಎರಡ್ಮೂರು ವರ್ಷಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಗ್ರಾಪಂನಿಂದ ಸ್ಮಶಾನಕ್ಕೆ ದಾರಿ ಗುರುತಿಸುವಂತೆ ಠರಾವು ಮಾಡಿ ತಹಸೀಲ್ದಾರ್ ಕಚೇರಿಗೆ ಪತ್ರ ನೀಡಲಾಗಿದೆ.

ಪಿಡಿಒ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಗ್ರಾಮಸ್ಥರನ್ನು ಒಳಗೊಂಡ ಠರಾವಿಗೆ ಯಾವುದೇ ಮಾನ್ಯತೆ ನೀಡದೆ, ಸಬೂಬು ಹೇಳುವ ಮೂಲಕ ಗ್ರಾಮಸ್ಥರ ಬೇಡಿಕೆ ತಿರಸ್ಕರಿಸಲಾಗಿದೆ. ಪಂಚಾಯಿತಿ ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಪದೇಪದೆ ಕಂದಾಯ ಇಲಾಖೆಗೆ ಓಡಾಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು. ಉಪತಹಸೀಲ್ದಾರ್ ನಾಗರತ್ನಾ ಕಾಳೇರ ಅವರಿಗೆ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರು ಮನವಿ ಸಲ್ಲಿಸಿದರು. ಗ್ರಾಪಂ ಸದಸ್ಯ ಹೇಮಂತ ಶೆಟ್ರ, ಗ್ರಾಮದೇವತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಲಿಂಗಪ್ಪ ಚಿಕ್ಕನಗೌಡ್ರ, ಗ್ರಾಮದ ಹಿರಿಯರಾದ ಮಾಲತೇಶ ದೊಡ್ಡಮನಿ, ಕುಮಾರ ತೋಟದ, ಲಕ್ಷ್ಮಣ ಗದ್ಲಪ್ಪನವರ, ಪ್ರಶಾಂತ ಸಣ್ಣನೀಲಪ್ಪನವರ, ರಾಮಣ್ಣ ತೆವರಿ, ಚಮನಸಾಬ್ ನದಾಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net