ಬೆಲಗೂರು ಮಹಾಲಕ್ಷ್ಮಿದೇವಿಗೆ ನವರತ್ನ ಖಚಿತ ಸ್ವರ್ಣ ಕಿರೀಟ

251
Published on

ಹೊಸದುರ್ಗ: ತಾಲೂಕಿನ ಬೆಲಗೂರಿನ ವೀರಪ್ರತಾಪ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಹಾಲಕ್ಷ್ಮಿದೇವಿಗೆ ನವರತ್ನ ಖಚಿತ ಸ್ವರ್ಣ ಕಿರೀಟ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜೂ.26 ರಂದು ಸಂಜೆ 6ಕ್ಕೆ ಶೃಂಗೇರಿ ಶ್ರೀಗಳ ಪುರಪ್ರವೇಶ ನಡೆಯಲಿದೆ. ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧೂಳಿ ಪಾದಪೂಜೆ, ಚಂದ್ರಮೌಳೀಶ್ವರ ಪೂಜೆ ಜರುಗಲಿವೆ.

27 ರ ಗುರುವಾರ ಬೆಳಗ್ಗೆ 9 ಕ್ಕೆ ವೀರ ಪ್ರತಾಪ ಆಂಜನೇಯ ಸ್ವಾಮಿಗೆ ಮಹಾರುದ್ರಾಭಿಷೇಕ, ಕಲ್ಪೋಕ್ತ ಪೂಜೆ, 9.45ಕ್ಕೆ ಶೃಂಗೇರಿ ಶ್ರೀಗಳಿಂದ ಮಹಾಲಕ್ಷ್ಮಿ ಅಮ್ಮನವರ ಶಿಲಾಮೂರ್ತಿಗೆ ನವರತ್ನ ಖಚಿತ ಸುವರ್ಣ ಕಿರೀಟಧಾರಣೆ, ನಂತರ ರುದ್ರ ಹೋಮದ ಪೂರ್ಣಾಹುತಿ ನಡೆಯಲಿದೆ.

ಬೆಳಗ್ಗೆ 11 ಕ್ಕೆ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಗುರುವಂದನೆ, ಫಲಸರ್ಮಪಣೆ, ಶ್ರೀಗಳಿಂದ ಅನುಗ್ರಹ ಸಂದೇಶದ ನಂತರ ಭಕ್ತರಿಗೆ ಫಲಮಂತ್ರಾಕ್ಷತೆಯ ಅನುಗ್ರಹ ಸಿಗಲಿದೆ. ಮಧ್ಯಾಹ್ನ 3 ಕ್ಕೆ ಲಕ್ಷ್ಮಿನಾರಾಯಣ ಸ್ವಾಮಿ ದೇವಾಲಯದಲ್ಲಿ ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.

ಸಿಂಗಾರಗೊಂಡ ಬೆಲಗೂರು: ಬೆಲಗೂರಿಗೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಮೊದಲ ಬಾರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪುರಪ್ರವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀಗಳ ಮೆರವಣಿಗೆ ಸಾಗಲಿರುವ ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಆಂಜನೇಯ ಸ್ವಾಮಿ ದೇವಾಲಯದ ಸುತ್ತ ಬೃಹತ್ ಪೆಂಡಾಲ್ ಹಾಕಲಾಗಿದೆ. ಎರಡು ದಿನಗಳ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.

650 ಗ್ರಾಂ. ತೂಕದ ಸ್ವರ್ಣ ಕಿರೀಟ

ಅವಧೂತ ಸದ್ಗುರು ಬಿಂಧುಮಾಧವ ಶರ್ಮಾ ಸ್ವಾಮೀಜಿ ಅವರ ಸಂಕಲ್ಪದಂತೆ ಭಕ್ತರು ಮಹಾಲಕ್ಷ್ಮಿ ಅಮ್ಮನವರ ಶಿಲಾ ಮೂರ್ತಿಗೆ 650 ಗ್ರಾಂ. ತೂಕದ ನವರತ್ನ ಖಚಿತ ಸ್ವರ್ಣ ಕಿರೀಟ ಅರ್ಪಿಸಲು ಮುಂದಾಗಿದ್ದಾರೆ. ಶೃಂಗೇರಿ ಜಗದ್ಗುರು ಸಾನ್ನಿಧ್ಯದಲ್ಲಿ ಅವರ ಅಮೃತಹಸ್ತದಿಂದ ಕಿರೀಟ ಸಮರ್ಪಣೆ ನಡೆಯಲಿದೆ. ಬೆಲಗೂರಿನಲ್ಲಿ ಎರಡು ದಿನಗಳ ಕಾಲ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರು ಶ್ರೀಗಳ ಕೃಪಾಶೀರ್ವಾದ ಪಡೆಯಬೇಕು ಎಂದು ಮಾರುತಿ ಪೀಠದ ಪೀಠಾಧಿಪತಿ ವಿಜಯ ಮಾರುತಿ ಸ್ವಾಮೀಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net