

ಬೆಳಗಾವಿ:ಜಿಲ್ಲೆಯ ಹಾಲು ಉತ್ಪಾದಕರಿಗೆ ಪ್ರೋತ್ಸಾಹಿಸುವ, ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸದಸ್ಯರಿಗೆ 2.40 ಕೋಟಿ ರೂ.ವೆಚ್ಚದ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಒಕ್ಕೂಟಕ್ಕೆ ಆದ ಲಾಭಾಂಶದಲ್ಲಿ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರರಿಗೆ ದೀಪಾವಳಿಯ ಕೊಡುಗೆಯನ್ನಾಗಿ ನೀಡಲಾಗುತ್ತಿದೆ ಎಂದು ಶಾಸಕ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಮಹಾಂತೇಶ ನಗರದಲ್ಲಿ ಪ್ರಸ್ತುತ ಸಾಲಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವು ಗಳಿಸಿದ ಲಾಭಾಂಶದಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಶೇ. 60 ರಷ್ಟು ಅನುದಾನದಲ್ಲಿ 2.40 ಕೋಟಿ ರೂ.ವೆಚ್ಚದ ವಿವಿಧ ಉಪಕರಣಗಳನ್ನು ವಿತರಿಸಿ ಮಾತನಾಡಿ,ಒಕ್ಕೂಟದ ಅನುದಾನದಲ್ಲಿ 100 ಸದಸ್ಯರಿಗೆ 13,47,500 ರೂ.ವೆಚ್ಚದ ವಿದ್ಯುತ ಚಾಲಿತ ಹಾಲು ಕರೆಯುವ ಯಂತ್ರ ಸಿಂಗಲ್ ಬಕೆಟ್, 100 ಸದಸ್ಯರಿಗೆ 16 ಲಕ್ಷ ರೂ. ವೆಚ್ಚದ ವಿದ್ಯುತ ಚಾಲಿತ 2 ಎಚ್.ಪಿ ಮೇವು ಕತ್ತರಿಸುವ ಯಂತ್ರ, 300 ಜನ ಫಲಾನುಭವಿಗಳಿಗೆ 85,71,300 ರೂಪಾಯಿ ವೆಚ್ಚದ ಡೀಸೆಲ್ ಚಾಲಿತ 5 ಎಚ್.ಪಿ ಮೇವು ಕತ್ತರಿಸುವ ಯಂತ್ರ ಮತ್ತು 1.25 ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ರಬ್ಬರ ಮ್ಯಾಟ್ ಗಳನ್ನು ರೈತ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 664 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಆಕಳು ಮತ್ತು ಎಮ್ಮೆ ಹಾಲು ಸೇರಿ ದಿನಂಪ್ರತಿ ಸರಾಸರಿ 3.20 ಲಕ್ಷ ಹಾಲು ಶೇಖರಣೆಯಾಗುತ್ತಿದೆ. ಇದರಲ್ಲಿ ಸರಾಸರಿ 2.45 ಲಕ್ಷ ಲೀಟರ್ ಆಕಳು ಹಾಲು ಹಾಗೂ ಸರಾಸರಿ 71 ಸಾವಿರ ಕ್ಕೂ ಅಧಿಕ ಎಮ್ಮೆ ಹಾಲು ಸಂಗ್ರಹವಾಗುತ್ತಿರುವುದು ನಂದಿನಿ ಮೇಲೆ ರೈತರು ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಅವರು ಹೇಳಿದರು.
ಸರ್ಕಾರವು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಪರಿಷ್ಕರಣೆ ಮಾಡಿದ್ದರಿಂದ ಹಾಲು, ಮೊಸರು, ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳ ಬೆಲೆ ಏರಿಕೆಯಾಗಿವೆ. ಲಕ್ಷಾಂತರ ಗ್ರಾಹಕರು ನಂದಿನಿ ಉತ್ಪನ್ನಗಳ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಗ್ರಾಹಕ ಬಂಧುಗಳ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಕಲಬೆರಕೆ ರಹಿತ ಶುದ್ಧ ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆಯನ್ನು ಮಾಡಲಾಗುತ್ತಿದೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವರ ಜೀವನೋಪಾಯವನ್ನು ಸುಸ್ಥಿರವಾಗಿರಿಸಲು ಮತ್ತು ಹಾಲು ಉತ್ಪಾದನಾ ಕ್ಷೇತ್ರ ನಿರಂತರವಾಗಿ ಅಭಿವೃದ್ಧಿ ಹೊಂದಬೇಕೆನ್ನುವ ಉದ್ದೇಶದಿಂದ ಅನಿವಾರ್ಯ ಕಾರಣಗಳಿಂದ ನಂದಿನಿ ಹಾಲಿನ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು ಶಂಕರ ಇಟ್ನಾಳ್, ಮಲ್ಲಪ್ಪ ಪಾಟೀಲ, ಡಾ.ಬಸವರಾಜ ಪರವನ್ನವರ, ರಾಯಪ್ಪ ಡಿ., ವಿರೂಪಾಕ್ಷ ಇಟಿ ಇತರರಿದ್ದರು.
.........