

ಬೆಳಗಾವಿ:ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಅಧಿವೇಶನ ಹೆಸರಿನಲ್ಲಿ ಕಚೇರಿ ಕೆಲಸಕ್ಕೆ ಮೊಟಕುಗೊಳಿಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಳಿಗಾಲ ಅಧಿವೇಶನ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿಯ ಚಳಿಗಾಲ ಅಧಿವೇಶನಕ್ಕಾಗಿ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಉಪ ಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿ ವಹಿಸಲಾಗುವುದು.ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ, ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಪತ್ರಕರ್ತರು, ಗಣ್ಯ ವ್ಯಕ್ತಿಗಳಿಗೆ ಸೂಕ್ತ ವಸತಿ, ಊಟ, ಸಾರಿಗೆ ವ್ಯವಸ್ಥೆ ಒದಗಿಸಬೇಕು.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಸಚಿವರುಗಳಿಗೆ ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಗಾವಹಿಸಬೇಕು. ನಿರ್ಲಕ್ಷೃ ವಹಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕ್ಕಂ ಮಾತನಾಡಿ, ಚಳಿಗಾಲ ಅಧಿವೇಶನ ಪೂರ್ವದಲ್ಲಿ ಭದ್ರತೆ, ಪ್ರತಿಭಟನೆ ಸ್ಥಳಗಳ ಕುರಿತು ಅಂತಿಮಗೊಳಿಸಬೇಕು. ಕೊನೆಯ ಗಳಿಗೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಪ್ರತಿಭಟನೆ ನಡೆಸುವ ಸ್ಥಳ, ಪೊಲೀಸ್ ಸಿಬ್ಬಂದಿಗೆ ವಸತಿ ಸೇರಿದಂತೆ ಇತರೆ ಕಾರ್ಯಗಳ ಕುರಿತು ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್. ಕೆ, ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಡಿಸಿಪಿ ನಾರಾಯಣ ಭರಮಣಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಲ್ಲಿಕಾರ್ಜುನ ಕಲಾದಗಿ, ಎಚ್.ಡಿ.ಕೋಳೇಕರ್ ಇತರರಿದ್ದರು.
..........
ಬಾಕ್ಸ್
ಡಿಸೆಂಬರ್‌ನಲ್ಲಿ ಅಧಿವೇಶನ ಆರಂಭ
ಈಬಾರಿ ಸುವರ್ಣ ವಿಧಾನಸೌಧದಲ್ಲಿಯೇ ಡಿಸೆಂಬರ್ ಮೊದಲ ವಾರದಲ್ಲಿ ವಿಧಾನಮಂಡಳ ಚಳಿಗಾಲ ಅಧಿವೇಶ ನಡೆಸುವ ಕುರಿತು ಅಂತಿಮವಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೇ ದಿನಾಂಕ ಘೋಷಣೆ ಮಾಡಲಿದಾರೆ. ಮತ್ತೊಂದೆಡೆ ತೀವ್ರ ಬರಗಾಲ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನ ನಡೆಸಿ ದುಂದು ವೆಚ್ಚ ಮಾಡುವುದು ಬೇಡ ಕಾಂಗ್ರೆಸ್, ಬಿಜೆಪಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
......