

ಪಾಲನೆಯಾಗದ ಸಂಚಾರ ನಿಯಮ
ಚಿಕ್ಕೋಡಿ ಕೆ.ಸಿ. ರಸ್ತೆಯಲ್ಲಿ ಟ್ರಾಪಿಕ್ ಸಮಸ್ಯೆ | ಹೆಸರಿಗಷ್ಟೇ ರೂಲ್ಸ್
ಆನಂದ ಭಮ್ಮನ್ನವರ ಚಿಕ್ಕೋಡಿ
ಇಲ್ಲಿಯ ಪ್ರಮುಖ ಮಾರುಕಟ್ಟೆ ಸ್ಥಳವಾದ ಕೆ.ಸಿ. ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಯಾಗುತ್ತಿದ್ದು, ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿನ ಹಳೇ ಪುರಸಭೆ ಕಾರ್ಯಾಲಯದಿಂದ ಬಸ್ ನಿಲ್ದಾಣದವರೆಗಿನ ರಸ್ತೆಯ ಎರಡು ಬದಿಗಳಲ್ಲಿ ದ್ವಿಚಕ್ರ ವಾಹನ, ಕಾರು ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಜತೆಗೆ ತಳ್ಳುಗಾಡಿ, ಬೀದಿಬದಿ ವ್ಯಾಪಾರಸ್ಥರು ರಸ್ತೆಯಲ್ಲೆ ವ್ಯಾಪಾರಕ್ಕೆ ಇಳಿದಿರುವುದರಿಂದ ಸರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಗಮನ ಹರಿಸಬೇಕಾದ ಪುರಸಭೆ ಮತ್ತು ಸಂಚಾರ ಪೊಲೀಸರು ಜಾಣಮೌನ ವಹಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಟಾಚಾರದ ನಿಯಮ:
ಕೆ.ಸಿ. ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಸಂಚಾರ ಪೊಲೀಸರು ಮತ್ತು ಪುರಸಭೆ ಆಡಳಿತ ಕಳೆದ ಮೂರು ತಿಂಗಳ ಹಿಂದೆ ಜಂಟಿಯಾಗಿ ಮಂಗಳವಾರ, ಗುರುವಾರ ಮತ್ತು ಶನಿವಾರ ಒಂದು ಬದಿ ಮತ್ತು ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆಗೆ ಫಲಕ ಅಳವಡಿಸಲಾಗಿದೆ. ಆದರೆ, ಫಲಕದಲ್ಲಿ ಮಾತ್ರ ನಿಯಮವಿದ್ದು, ವಾಸ್ತವದಲ್ಲಿ ಜಾರಿಯಾಗಿಲ್ಲ.
ಪಾದಚಾರಿ ಇಲ್ಲದೆ ಪರದಾಟ:
ರಸ್ತೆಯ ಎರಡು ಬದಿಯಲ್ಲಿ ಬೀದಿಬದಿ ವ್ಯಾಪಾರಸ್ಥರು, ಹಣ್ಣಿನ ಅಂಗಡಿಕಾರರು ಮತ್ತು ವಾಹನಗಳು ನಿಲ್ಲುವುದರಿಂದ ಜನರು ನಡು ರಸ್ತೆಯಲ್ಲೇ ಜೀವಭಯದಲ್ಲಿ ಓಡಾಡಬೇಕಿದೆ. ಹಣ್ಣಿನ ಅಂಗಡಿಕಾರರು ಅರ್ಧ ರಸ್ತೆಯನ್ನೇ ಆವರಿಸಿಕೊಂಡ ಪರಿಣಾಮ ಬಸ್ ನಿಲ್ದಾಣದಿಂದ ಹಳೇ ಪುರಸಭೆವರೆಗೂ ಸಂಚಾರ ದುಸ್ತರವಾಗಿದೆ.
ಪರ್ಯಾಯ ವ್ಯವಸ್ಥೆಗೆ ಒತ್ತಾಯ:
ಕೆ.ಸಿ. ರಸ್ತೆಯಲ್ಲಿ ವಾಹನ ದಟ್ಟನೆ ನಿಯಂತ್ರಿಸಲು ಇಲ್ಲಿನ ಬೀದಿಬದಿ ವ್ಯಾಪಾರಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲು ಪುರಸಭೆ
ಬೀದಿಬದಿ ವ್ಯಾಪಾರಸ್ಥರಿಗೆ ನಿಗದಿ ಪಡಿಸಿರುವ ಜಯನಗರದಲ್ಲಿನ ಸ್ಥಳದಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ತರಕಾರಿ, ಹಣ್ಣು ಮಾರಾಟ ಮಾಡಲು ಅದು ಸೂಕ್ತವಾಗಿಲ್ಲ. ಸ್ವಚ್ಛತೆ, ಶೌಚಗೃಹ ಇಲ್ಲದಿರುವ ಹಿನ್ನೆಲೆಯಲ್ಲಿ ವ್ಯಾಪಾರ ಮಾಡುವುದು ಹೇಗೆ ಎಂಬುವುದು ವ್ಯಾಪಾರಸ್ಥರ ಪ್ರಶ್ನೆಯಾಗಿದೆ.
ಸುಗಮ ಸಂಚಾರಕ್ಕೆ ಒತ್ತಾಯ:
ಜಿಲ್ಲೆಯ ಸನೀಹದಲ್ಲಿರುವ ಚಿಕ್ಕೋಡಿ ದಿನೇ ದಿನೆ ಬೆಳೆಯುತ್ತಿದೆ. ಇಲ್ಲಿನ ಆಡಳಿತ ವ್ಯವಸ್ಥೆಯ ಉದಾಸೀನತೆಯಿಂದ ಸಂಚಾರ ನಿಮಯಗಳು ಪಾಲನೆಯಾಗುತ್ತಿಲ್ಲ. ಪುರಸಭೆ ಆಡಳಿತ ಮತ್ತು ಸಂಚಾರ ಪೊಲೀಸ್ರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ ಎಂಬ ಮಾತು ಜನರಿಂದ ಕೇಳಿ ಬಂದಿದೆ.
---------
ಬೀದಿಬದಿ ವ್ಯಾಪಾರಸ್ಥರನ್ನು ಬೇರೆಡೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸ್ಥಳದ ಅಭಾವದಿಂದ ಸ್ಥಳಾಂತರ ಕಾರ್ಯ ಸ್ಥಗಿತಗೊಂಡಿದೆ. ವಾಹನ ನಿಲುಗಡೆ ನಿಯಮಕ್ಕೆ ಕೆಲ ಅಂಗಡಿಕಾರರ ವಿರೋಧವಿದೆ. ಆದರೂ, ಬೇಕಾಬಿಟ್ಟಿ ವಾಹನ ನಿಲ್ಲಿಸದಂತೆ ಕ್ರಮವಹಿಸಲಾಗುವುದು.
| ಜಗದೀಶ ಈಟಿ
ಪುರಸಭೆ ಮುಖ್ಯಾಧಿಕಾರಿ, ಚಿಕ್ಕೋಡಿ