

ಕನ್ನಡ ಬೆಳವಣಿಗೆಗೆ ಕೈಜೋಡಿಸಿ
|ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅಭಿಪ್ರಾಯ | ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಕರ್ನಾಟಕವು ಸ್ವತಂತ್ರ ಹಾಗೂ ಸಮೃದ್ಧ ಇತಿಹಾಸ ಹೊಂದಿರುವ ಹೆಮ್ಮೆಯ ನಾಡಾಗಿದ್ದು,ಕನ್ನಡ ಭಾಷೆಯನ್ನು ದೈನಂದಿನ ಬದುಕಿನಲ್ಲಿ ಹೆಚ್ಚಾಗಿ ಬಳಸುವ ಮೂಲಕ ಅದರ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅಭಿಪ್ರಾಯಪಟ್ಟರು.
ಪಟ್ಟಣದ ಆರ್.ಡಿ. ಮೈದಾನದಲ್ಲಿ ಈಚೆಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ.ಕನ್ನಡದ ಭಾಷಾ ಪರಿಮಳವನ್ನು ಎಲ್ಲೆಡೆ ಪಸರಿಸುವುದರೊಂದಿಗೆ ನಾಡಿನ ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ತ್ಯಾಗ ಮತ್ತು ಹೋರಾಟವನ್ನು ಸದಾ ಸ್ಮರಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಡಿಡಿಪಿಐ ಅಜಿತ ಮನ್ನಿಕೇರಿ ಮಾತನಾಡಿದರು.
ಇದೇ ವೇಳೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುನ್ನ ಪಟ್ಟಣದ ಆರ್.ಡಿ. ಮೈದಾನದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಕಲಾತಂಡಗಳು ಹಾಗೂ
ವಾದ್ಯಮೇಳದೊಂದಿಗೆ ಎತ್ತಿನ ಗಾಡಿಯಲ್ಲಿ ಭುವನೇಶ್ವರಿ ದೇವಿಯ ಮೂರ್ತಿ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ೧೫ ವೈವಿಧ್ಯಮಯ ರೂಪಕಗಳು ಸಾರ್ವಜನಿಕರ ಗಮನ ಸೆಳೆದವು.
ತಹಶೀಲ್ದಾರ ರಾಜೇಶ ಬುರ್ಲಿ,ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇತರರಿದ್ದರು.