ಜಿಲ್ಲಾದ್ಯಂತ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ನಿಧಾನ

ಬೆಳಗಾವಿ ಪಾಲಿಕೆಯಲ್ಲಿ ಸೋಮವಾರ ಶಾಸಕ ಅಭಯ ಪಾಟೀಲ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪರಿಶೀಲನಾ ಸಭೆ ಕೈಗೊಂಡರು. ಮಂಗೇಶ ಪವಾರ, ವಾಣಿ ಜೋಶಿ, ಎಂ.ಕಾರ್ತಿಕ, ಹನುಮಂತ ಕೊಂಗಾಲಿ ಇದ್ದರು.
ಬೆಳಗಾವಿ ಪಾಲಿಕೆಯಲ್ಲಿ ಸೋಮವಾರ ಶಾಸಕ ಅಭಯ ಪಾಟೀಲ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪರಿಶೀಲನಾ ಸಭೆ ಕೈಗೊಂಡರು. ಮಂಗೇಶ ಪವಾರ, ವಾಣಿ ಜೋಶಿ, ಎಂ.ಕಾರ್ತಿಕ, ಹನುಮಂತ ಕೊಂಗಾಲಿ ಇದ್ದರು.
Published on
ಬೆಳಗಾವಿ : ಜಿಲ್ಲಾದ್ಯಂತ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಎಲ್ಲ ಕ್ಷೇತ್ರಗಳಲ್ಲಿ ಶೇ.80ರಷ್ಟು ಪ್ರಗತಿಯಾಗಿದೆ. ಬೆಳಗಾವಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಶೇ.60ರಷ್ಟೂ ಪ್ರಗತಿಯಾಗಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸು ವುದಾಗಿ ಶಾಸಕ ಅಭಯ ಪಾಟೀಲ ಎಚ್ಚರಿಕೆ ನೀಡಿದರು.
ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮತ್ತು ಮೇಲ್ವಿಚಾರಕರ ಸಭೆಯಲ್ಲಿ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪರಿಶೀಲಿಸಿದ ಅವರು, ಮಹಾನಗರ ಪಾಲಿಕೆ ಅಡಿಯಲ್ಲಿ ನಿಯೋಜನೆಗೊಂಡಿರುವ ಕೆಲ ಬಿಎಲ್‌ಒಗಳಿಗೆ ನಿಗದಿತ ಫಾರ್ಮ್ ತುಂಬಲು ಬರುತ್ತಿಲ್ಲ. ಅವರೆನ್ನೆಲ್ಲ ಎರಡು ದಿನದಲ್ಲಿ ಪಾಲಿಕೆಗೆ ಕರೆಯಿಸಿ, ಲಿಖಿತ ಪರೀಕ್ಷೆ ರೂಪದಲ್ಲಿ ಫಾರ್ಮ್ ತುಂಬಿಸಿ ನೋಡಿ, ಅದರಲ್ಲಿ ಎಷ್ಟು ಜನ ಉತ್ತೀರ್ಣರಾಗುತ್ತಾರೋ ಅವರನ್ನು ಮಾತ್ರ ಮುಂದುವರಿಸಿ, ಉಳಿದವರಿಗೆ ಸೂಕ್ತ ತರಬೇತಿ ನೀಡಿ, ಇಲ್ಲವೇ ಬದಲಾಯಿಸಿ ಎಂದು ಆಯುಕ್ತರಿಗೆ ಸೂಚಿಸಿದರು.
ಬಿಎಲ್‌ಒಗಳನ್ನು ನೇಮಿಸಿದ್ದೇವೆ, ಕೆಲಸ ನಡೆದಿದೆ ಎಂದು ತೋರಿಸುವ ನಾಟಕದಂತೆ ಇದೆಲ್ಲವೂ ಕಾಣುತ್ತಿದ್ದು, ಮೇಲ್ವಿಚಾರಕರು ನಿಗಾವಹಿಸುತ್ತಿಲ್ಲ. ಮತದಾರರ ಮನೆಗೆ ಬಿಎಲ್‌ಒಗಳು ಭೇಟಿ ನೀಡುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡು ಬೇರೆ ಕಡೆ ಓಡಾಡಿಕೊಂಡಿದ್ದಾರೆ. ಅಂಥವರನ್ನು ಮೊಬೈಲ್ ಟವರ್ ಮೂಲಕ ಟ್ರೇಸ್ ಮಾಡಿ ಕಂಡುಹಿಡಿದಿದ್ದೇವೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ಉಪ ಆಯುಕ್ತ (ಕಂದಾಯ) ಸಿದ್ದು ಹುಲ್ಲೋಳಿ ಬಿಎಲ್‌ಇಗಳಿಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ವಿವರಿಸಿ 2002ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಮತದಾರರು ಈಗ ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಆಗಿನ ಪಟ್ಟಿಯಲ್ಲಿ ಹೆಸರು ಇಲ್ಲದವರು ಹುಟ್ಟಿನಿಂದ ಶಿಕ್ಷಣದವರೆಗಿನ 11 ದಾಖಲೆಗಳಲ್ಲಿ ಒಂದನ್ನು ಕೊಡಬೇಕು ಎಂದರು. ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net