ಬೈಲಹೊಂಗಲದಲ್ಲಿ ವರುಣಾರ್ಭಟ

ಬೈಲಹೊಂಗಲ ನಗರದ ವಿವಿಧೆಡೆ ಮನೆಗಳಿಗೆ ಮಳೆ ನೀರು ನುಗ್ಗುತ್ತಿದ್ದರೂ ಶಾಶ್ವತ ಪರಿಹಾರಕ್ಕೆ ಮುಂದಾಗದ ನಗರಸಭೆ ನಡೆ ಖಂಡಿಸಿ ಈಶ್ವರ ಶಿಲ್ಲೆದಾರ ಹರಿಯುತ್ತಿದ್ದ ನೀರಲ್ಲೇ ಕುಳಿತು ಪ್ರತಿಭಟಿಸಿದರು.
ಬೈಲಹೊಂಗಲ ನಗರದ ವಿವಿಧೆಡೆ ಮನೆಗಳಿಗೆ ಮಳೆ ನೀರು ನುಗ್ಗುತ್ತಿದ್ದರೂ ಶಾಶ್ವತ ಪರಿಹಾರಕ್ಕೆ ಮುಂದಾಗದ ನಗರಸಭೆ ನಡೆ ಖಂಡಿಸಿ ಈಶ್ವರ ಶಿಲ್ಲೆದಾರ ಹರಿಯುತ್ತಿದ್ದ ನೀರಲ್ಲೇ ಕುಳಿತು ಪ್ರತಿಭಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ, ಅಂಗಡಿಗಳಿಗೆ ನುಗ್ಗಿದ ಮಳೆ ನೀರು
  • ತೇಲಿ ಹೋದ ಸಾಮಗ್ರಿಗಳು
ಬೈಲಹೊಂಗಲ: ನಗರ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಏಕಾಏಕಿ ಸುರಿದ ಮೃಗಶಿರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಕಿತ್ತೂರು ಚನ್ನಮ್ಮ ಬ್ಯಾಂಕ್‌ನಿಂದ ಸಂಗೊಳ್ಳಿ ರಾಯಣ್ಣ ವತ್ತದವರೆಗೆ, ಅರ್ಬನ್ ಬ್ಯಾಂಕ್ ಹತ್ತಿರ ಮೇಲ್ಭಾಗದಿಂದ ಬಂದ ನೀರು ಹೊಳೆಯಂತೆ ಹರಿಯಿತು. ಬೈಕ್, ಮರದ ಕೊಂಬೆ, ಅಂಗಡಿ ಸಾಮಾನು ನೀರಿನಲ್ಲಿ ತೇಲಿ ಹೋಗಿದ್ದು, ಹಲವಾರು ಅಂಗಡಿಗಳಿಗೂ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿತು. 
ಇಂಚಲ ಕ್ರಾಸ್ ಬಳಿ ಹರಿಯುವ ನೀರಿನಲ್ಲಿ ರಸ್ತೆ ದಾಟಲು ವಾಹನ ಸವಾರರು, ಪಾದಚಾರಿಗಳು ಪರದಾಡಿದರೆ, ಬಸ್ ನಿಲ್ದಾಣದಲ್ಲಿ ನೀರಿನ ಹರಿವಿಗೆ ಬಸ್ ಸಂಚಾರ ಸ್ಥಗಿತಗೊಂಡಿತು. ಬೈಲಹೊಂಗಲ-ಬೆಳಗಾವಿ ರಸ್ತೆಯಲ್ಲಿ ಬರುವ ಹಳ್ಳಗಳು ತುಂಬಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಮಳೆಯ ರಭಸಕ್ಕೆ ನಗರದ ಅನೇಕ ಬಡಾವಣೆಗಳು ಮತ್ತು ಪ್ರಮುಖ ರಸ್ತೆಗಳು ನೀರಿನಿಂದ ಆವೃತಗೊಂಡವು. ಕುಲಕರ್ಣಿ ಗಲ್ಲಿ, ಹುಡೇದ ಬಾವಿ ಹತ್ತಿರ, ಹರಳಯ್ಯ ಕಾಲನಿ ಮನೆಗಳಿಗೆ ಮಳೆ ನೀರು ನುಗ್ಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು. ಬಸ್ ನಿಲ್ದಾಣ ಬಳಿಯ ದ್ವಿಚಕ್ರ ವಾಹನ ಶೋರೂಮ್ ಆವರಣ ಸಂಪೂರ್ಣ ನೀರಿನಿಂದ ಆವೃತಗೊಂಡಿತ್ತು.
ನ್ಯಾಯಾಲಯದ ಹಿಂಭಾಗದ ಪ್ರಭುನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಹತ್ ಗಾತ್ರದ ಮರ ವಿದ್ಯುತ್ ಕಂಬದ ಮೇಲೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಮುನವಳ್ಳಿ ರಸ್ತೆಯ ಹೊಸೂರ ಸಮೀಪ ಹಳ್ಳ ತುಂಬಿ ಹರಿದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳ ಮೊರೆ ಹೋಗಬೇಕಾಯಿತು.

ಖಾನಾಪುರದಲ್ಲೂ ಜೋರು 

ಖಾನಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಭಾರಿ ಮಳೆ ಸುರಿಯಿತು. ಪಟ್ಟಣದ ಹಲವಾರು ರಸ್ತೆಗಳು ಕೆರೆಯಂತಾಗಿದ್ದವು. ಕೆಲವೆಡೆ ಚರಂಡಿಗಳಿಗೆ ತ್ಯಾಜ್ಯ ತುಂಬಿದ್ದರಿಂದ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುವಂತಾಯಿತು. ವಾಹನ ಸವಾರರು ಪರದಾಡಿದರು.

ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತ

ಸವದತ್ತಿ: ಸೋಮವಾರ ಸಂಜೆ ನಾಲ್ಕು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ, ಸಂಪೂರ್ಣ ಜಲಾವತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು. ಗುಡ್ಡ ಪ್ರದೇಶಗಳಿಂದ ಹರಿದು ಬಂದ ಅಪಾರ ಪ್ರಮಾಣದ ನೀರು ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ಮನೆ, ಅಂಗಡಿ ಹಾಗೂ ರಸ್ತೆಗಳು ನೀರಿನಿಂದ ಆವೃತಗೊಂಡವು.
ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಕೆಲ ಮನೆಗಳಲ್ಲಿ ಗಹೋಪಯೋಗಿ ವಸ್ತುಗಳಿಗೆ ನಷ್ಟವಾದರೆ, ಅಂಗಡಿಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಪ್ರಮುಖ ರಸ್ತೆಗಳಲ್ಲಿ ನೀರು ಹರಿದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು. ಸಕಾಲಕ್ಕೆ ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಹಲವು ಕಡೆ ನೀರು ಸಂಗ್ರಹಗೊಂಡು ಸಮಸ್ಯೆ ಮತ್ತಷ್ಟು ಹೆಚ್ಚಾಯಿತು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹಾಗೂ ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದ್ದಗಿಮಠ ಸಿಬ್ಬಂದಿ ಜತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಗುಡ್ಡದಿಂದ ಹರಿದು ಬರುತ್ತಿದ್ದ ನೀರನ್ನು ಬೇರೆ ದಿಕ್ಕಿಗೆ ಹರಿಸುವ ಮೂಲಕ ಹಾನಿ ತಗ್ಗಿಸಲು ಅಧಿಕಾರಿಗಳು ಕ್ರಮ ಕೈಗೊಂಡರು. ಉತ್ತಮ ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ಮುಂಗಾರು ಬಿತ್ತನೆಗೆ ಭೂಮಿ ಸಿದ್ಧಗೊಳಿಸಿದ್ದರಿಂದ ಕಷಿ ಚಟುವಟಿಕೆಗಳಿಗೆ ಮಳೆ ಹೊಸ ಚೈತನ್ಯ ತುಂಬಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net