ಅನೈತಿಕ ಕೃತ್ಯಕ್ಕೆ ಮುರಗೋಡ ಪ್ರವಾಸಿ ಮಂದಿರ ಎಡೆ

 ನಿರ್ವಹಣೆ ಕೊರತೆಯಿಂದ ನಲಗುತ್ತಿರುವ ಮುರಗೋಡದ ಪ್ರವಾಸಿಮಂದಿರ.
ನಿರ್ವಹಣೆ ಕೊರತೆಯಿಂದ ನಲಗುತ್ತಿರುವ ಮುರಗೋಡದ ಪ್ರವಾಸಿಮಂದಿರ.
Published on
ಬೈಲಹೊಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮುರಗೋಡದಲ್ಲಿ ಐತಿಹಾಸಿಕ ಮಹಾಂತ ದುರದುಂಡೇಶ್ವರ ಮಠ, ಶ್ರೀ ಶಿವಚಿದಂಬರೇಶ್ವರ ಮಠಗಳಿವೆ. ಗ್ರಾಮದಲ್ಲಿ 1968ರಲ್ಲಿ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರವನ್ನು ಲಿಂ.ಮಹಾಂತ ಶಿವಯೋಗಿಗಳು ಉದ್ಘಾಟಿಸಿದ್ದರು.
ಗ್ರಾಮದ ಪ್ರತಿಷ್ಠಿತ ದೇಸಾಯಿ ಮನೆತನ ದಾನ ಮಾಡಿದ್ದ 4 ಎಕರೆ ಜಾಗದಲ್ಲಿ ನಿರ್ಮಿಸಿದ ಪ್ರವಾಸಿಮಂದಿರ ಸಭಾಭವನ, ಎರಡು ಕೊಠಡಿ ಹಾಗೂ ಅಡುಗೆ ಕೋಣೆ ಒಳಗೊಂಡಿದೆ. ಆವರಣದಲ್ಲಿ 100ಕ್ಕೂ ಹೆಚ್ಚು ನೀಲಗಿರಿ ಮರಗಳಿವೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೆ ಮದ್ಯವ್ಯಸನಿಗಳು ಹಾಗೂ ಪುಂಡ ಪೋಕರಿಗಳ ಅಡ್ಡೆಯಾಗಿದೆ. ಎಲ್ಲೆಂದರಲ್ಲಿ ಮದ್ಯದ ಪ್ಯಾಕೇಟ್ ಹರಡಿಕೊಂಡಿವೆ.
ಇಲ್ಲಿನ ಗ್ರಾಮ ಪಂಚಾಯಿತಿ 32 ಸದಸ್ಯರ ಸಂಖ್ಯಾಬಲ ಹೊಂದಿದ್ದು, 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಸುಕ್ಷೇತ್ರ ಸೊಗಲ, ಕಾರಿಮನಿ ಮಲ್ಲಯ್ಯ, ಪಂಚವಟಿ ಕಲ್ಯಾಣ ಕೇಂದ್ರ ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಗ್ರಾಮದ ಮಾರ್ಗವಾಗಿ ಅನೇಕ ಗಣ್ಯರು, ಭಕ್ತರು ಪ್ರಯಾಣಿಸುತ್ತಾರೆ. ಆದರೆ, ವ್ಯವಸ್ಥಿತ ಪ್ರವಾಸಿ ಮಂದಿರವಿಲ್ಲದೆ ಪರದಾಡುವಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಪ್ರವಾಸಿಮಂದಿರ ನಿರ್ವಹಣೆಗೆ ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net