ಬೆಳಗಾವಿ: ಮಹಾನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಕೆಲವೆಡೆ ಗುಡುಗಿನ ಅಬ್ಬರದ ಜತೆಗೆ ಆಲಿಕಲ್ಲುಗಳೂ ಬಿದ್ದವು.
ಬುಧವಾರ ಬೆಳಗ್ಗೆಯಿಂದ ಉರಿ ಬಿಸಿಲು ಇದ್ದರೂ ಸಂಜೆ 5 ಗಂಟೆಗೆ ಮಳೆ ಸುರಿಯಲು ಆರಂಭಿಸಿ, ಅರ್ಧಗಂಟೆವರೆಗೆ ಮಳೆಯಾಯಿತು.
ಹಲವು ಗ್ರಾಮಗಳಲ್ಲಿ ರಸ್ತೆ ಮೇಲೆ ನೀರು ಹರಿದು ಅಲ್ಲಲ್ಲಿ ಸಂಚಾರ ಸಿಕ್ಕು ಉಂಟಾಯಿತು. ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಸೇರಿ ವಿವಿಧ ಸರ್ಕಾರಿ ಕಚೇರಿ ಕಟ್ಟಡದಲ್ಲಿ ಸೋರಿಕೆಯಾಗಿ ಸಮಸ್ಯೆ ಸೃಷ್ಟಿಸಿತು.
ಖಾನಾಪುರ, ಬೆಳಗಾವಿ, ಹುಕ್ಕೇರಿ, ಸವದತ್ತಿ, ರಾಮದುರ್ಗ, ಯರಗಟ್ಟಿ, ಬೈಲಹೊಂಗಲ, ಮೂಡಲಗಿ ಸೇರಿ ವಿವಿಧ ತಾಲೂಕಿನಲ್ಲಿ ಸಾಧಾರಣ ಮಳೆ ಸುರಿಯಿತು.