ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ

ಚಳಿಗಾಲದ ಅಧಿವೇಶನಕ್ಕೆ ಸಜ್ಜುಗೊಂಡಿರುವ ಬೆಳಗಾವಿಯ ಸುವರ್ಣ ವಿಧಾನಸೌಧ.
ಚಳಿಗಾಲದ ಅಧಿವೇಶನಕ್ಕೆ ಸಜ್ಜುಗೊಂಡಿರುವ ಬೆಳಗಾವಿಯ ಸುವರ್ಣ ವಿಧಾನಸೌಧ.
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಕಟ್ಟೆಚ್ಚರ
  • ಇಂದಿನಿಂದ ನಿಷೇಧಾಜ್ಞೆ ಜಾರಿ
ಬೆಳಗಾವಿ: ದೆಹಲಿಯ ಕೆಂಪುಕೋಟೆ ಬಳಿಯ ಕಾರು ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಬೆಳಗಾವಿಯಲ್ಲಿ ಆರಂಭಗೊಳ್ಳುವ ಎರಡು ವಾರಗಳ ಚಳಿಗಾಲದ ಅಧಿವೇಶನಕ್ಕೆ ಹೆಚ್ಚಿನ ಕಟ್ಟೆಚ್ಚರ ವಹಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಒಂದು ವಾರ ಮುಂಚಿತವಾಗಿಯೇ ಸುವರ್ಣಸೌಧದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಸಂಬಂಧ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಆಗಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.
ದೆಹಲಿ ಕೆಂಪುಕೋಟೆ ಸ್ಫೋಟ ಪ್ರಕರಣವನ್ನೂ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈವರೆಗೆ ಬೆಳಗಾವಿ ಅಧಿವೇಶನ ಸಂದರ್ಭದ ಪ್ರತಿಭಟನೆಗಳಲ್ಲಿ 27 ಅಹಿತಕರ ಘಟನೆಯ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 73 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, 21 ಸಾರ್ವಜನಿಕರಿಗೆ ಗಾಯವಾಗಿದ್ದಲ್ಲದೇ, ಒಟ್ಟು 6,23,300 ರೂ. ಮೌಲ್ಯದ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆಗಿರುವುದಾಗಿ ನಮೂದಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ಡಿ.1ರಿಂದ ಡಿ.21ರ ಮಧ್ಯರಾತ್ರಿ 12ರವರೆಗೆ ಸುವರ್ಣಸೌಧದ ಸುತ್ತಮುತ್ತ 3ಕಿಮೀ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೇ 5ಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ನಡೆಸುವುದನ್ನು ಹಾಗೂ ಶಸ್ತ್ರ, ಬಡಿಗೆ, ಬಂದೂಕು ಸೇರಿ ದೇಹಕ್ಕೆ ಅಪಾಯವನ್ನುಂಟು ಮಾಡುವ ಮಾರಕಾಸ್ತ್ರಗಳನ್ನು ತೆಗೆದುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಕಳೆದ ವರ್ಷ ಪಂಚಮಸಾಲಿ ಮೀಸಲಾತಿ ಹೋರಾಟ ಉಗ್ರ ಸ್ವರೂಪ ಪಡೆದು ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆ ಸಂಘರ್ಷವಾಗಿತ್ತು. ಗಲಾಟೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೂ ಗಾಯಗೊಂಡಿದ್ದರು. ಈ ಗಲಾಟೆ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಸರ್ಕಾರ ನ್ಯಾಯಾಂಗ ತನಿಖೆಗೂ ಆದೇಶಿಸಿತ್ತು. ಈಚೆಗಷ್ಟೇ ಈ ತನಿಖೆ ಪೂರ್ಣಗೊಂಡಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವುದು ಬಾಕಿ ಇದೆ. ಈ ಕಾರಣದಿಂದ ಪೊಲೀಸ್ ಇಲಾಖೆ ಮತ್ತೆ ಇಂತಹ ಗಲಾಟೆಯಾಗದಂತೆ ಮುಂಜಾಗ್ರತೆ ವಹಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net