ಸೀಟಿಸ್ ಘಟಕ ಯೋಜನೆಗೆ ಪಾಲಿಕೆ ಅಸ್ತು

ಬೆಳಗಾವಿ ಪಾಲಿಕೆ ಸಭೆಯಲ್ಲಿ ಆಯುಕ್ತ ಎಂ.ಕಾರ್ತಿಕ ಮಾತನಾಡಿದರು. ಮಂಗೇಶ ಪವಾರ, ವಾಣಿ ಜೋಶಿ ಇದ್ದರು.
ಬೆಳಗಾವಿ ಪಾಲಿಕೆ ಸಭೆಯಲ್ಲಿ ಆಯುಕ್ತ ಎಂ.ಕಾರ್ತಿಕ ಮಾತನಾಡಿದರು. ಮಂಗೇಶ ಪವಾರ, ವಾಣಿ ಜೋಶಿ ಇದ್ದರು.
Published on
ಬೆಳಗಾವಿ: ನಾವಿನ್ಯ, ಏಕೀಕರಣ ಮತ್ತು ಸ್ಥಿರತೆಯತ್ತ ಹೂಡಿಕೆ (ಸಿಟೀಸ್-2.0) ಅಡಿಯಲ್ಲಿ ಪ್ರಮುಖ ಘಟಕ ಯೋಜನೆಗಳ ಅನುಷ್ಠಾನ ಹಾಗೂ 75 ಕೋಟಿ ರೂ. ವೆಚ್ಚದ ಪ್ರಸ್ತಾವಕ್ಕೆ ಅನುಮೋದನೆ ನೀಡಲು ಪಾಲಿಕೆ ಪರಿಷತ್ ಸಭೆಯಲ್ಲಿ ಸೋಮವಾರ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸೋಮವಾರ ಜರುಗಿದ ಪರಿಷತ್ ಸಭೆಯಲ್ಲಿ ಸಿಟೀಸ್ 2.0 ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಕುರಿತು ಚರ್ಚಿಸಿ ಪ್ರಸ್ತಾವಕ್ಕೆ ಒಮ್ಮತ ವ್ಯಕ್ತಪಡಿಸಿದರು.
ಯೋಜನೆ ಅನುಷ್ಠಾನಕ್ಕೆ ಕಾನೂನು ತೊಡಕುಗಳು ಎದುರಾದರೆ ಸ್ಮಾರ್ಟ್‌ಸಿಟಿ ಯೋಜನೆಯವರೇ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ ಮೇಯರ್ ಮಂಗೇಶ ಪವಾರ, ಪ್ರಮುಖ ಘಟಕ ಯೋಜನೆಗಳ ಅನುಮೋದನೆಗೆ ಒಪ್ಪಿಗೆ ಸೂಚಿಸಿದರು.
ಆಡಳಿತ ಪಕ್ಷದ ಸದಸ್ಯ ರವಿ ಧೋತ್ರೆ ಮಾತನಾಡಿ, ಈ ಹಿಂದೆ ಹೇಳಿದ್ದೆ ಬೇರೆ, ಈಗ ಪ್ರಸ್ತಾವಕ್ಕೆ ತಂದಿರುವುದೇ ಬೇರೆ. ಜನರಿಗೆ ಪ್ರಯೋಜನವಾಗುವ ಯೋಜನೆಗಳು ಎಷ್ಟಿವೆ ಎಂದು ಸ್ಪಷ್ಟಪಡಿಸಲು ಆಗ್ರಹಿಸಿದರು.
ಯೋಜನೆ ಅನುಷ್ಠಾನಗೊಳಿಸುವ ಪೂರ್ವದಲ್ಲಿ ಸ್ಮಾರ್ಟ್‌ಸಿಟಿಯವರು ಪಾಲುದಾರರೊಂದಿಗೆ ಸಭೆ ನಡೆಸಬೇಕಿತ್ತು. ಈವರೆಗೂ ನಡೆಸಿಲ್ಲ. ಆಕ್ಷೇಪಣೆ ಕೇಳಿಕೊಂಡೇ ಮುಂದುವರಿಯಬೇಕು. ಇದನ್ನು ಸರಿಪಡಿಸಿಕೊಳ್ಳಿ ಎಂದು ಉಪಮೇಯರ್ ವಾಣಿ ಜೋಶಿ ಸೂಚಿಸಿದರು.
ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ವಾರಂಗಲ್ ಮಾತನಾಡಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಭೆ ನಡೆಸಿದ ನಂತರ ಹೊಸ ಘಟಕಗಳನ್ನು ಅಂತಿಮಗೊಳಿಸಲಾಗಿದೆ ಎಂದರು.
ಆಯುಕ್ತ ಎಂ.ಕಾರ್ತಿಕ, ಪಾಲಿಕೆ ವ್ಯಾಪ್ತಿಯ ಭೂಮಿಯನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ನೀಡಲಾಗಿದೆ ಎಂದರು.

ತರಾತುರಿ ಏಕೆ?

ತರಾತುರಿಯಲ್ಲಿ ಸಭೆ ಕರೆಯಲಾಗಿದೆ. ಮೇಯರ್ ತಮ್ಮ ಆಸನದಲ್ಲಿ ಬಂದು ಕುಳಿತ ಬಳಿಕ ಸಭೆಯ ನಡಾವಳಿ ಕೊಡುತ್ತಿದ್ದಾರೆ. ಮುಂಚಿತವಾಗಿ ಏಕೆ ಕೊಟ್ಟಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಸಿಟೀಸ್ 2.0 ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ತ್ವರಿತ ನಿರ್ಣಯ ಕೈಗೊಳ್ಳಲು ಅಲ್ಪಾವಧಿಯಲ್ಲೇ ಸಭೆ ಕರೆದಿದ್ದರಿಂದ ವ್ಯತ್ಯಾಸವಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಸಮಜಾಯಿಷಿ ಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net