ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ವ್ಯಾಪಾರ ವಹಿವಾಟಿನ ಕೇಂದ್ರವಾಗಿರುವ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಹೆಗ್ಗಳಿಕೆ ಹಾಗೂ ಕೈಗಾರಿಕೆ ವಲಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ 15 ಸಾವಿರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಫೌಂಡ್ರಿ ಮತ್ತು ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕೆ ಕೈಗಾರಿಕೆಗಳಿವೆ. 3ರಿಂದ 4 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ, ಸಾರಿಗೆ ಬಸ್ ಸೇರಿ ಇತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಚ್ಛೆ, ಉದ್ಯಮಬಾಗ, ಆಟೋನಗರ, ಹೊನಗಾ ಕೈಗಾರಿಕಾ ವಲಯಗಳು ಬೆಳೆದಿದ್ದರೂ ನೀರು, ವಿದ್ಯುತ್, ಸಾರಿಗೆ, ಆರೋಗ್ಯ, ಉತ್ತಮ ಸಂಪರ್ಕ ರಸ್ತೆಗಳ ಸೌಲಭ್ಯ ಅಷ್ಟಕ್ಕಷ್ಟೇ. ಉತ್ತರ ಕರ್ನಾಟಕದ ಕೈಗಾರಿಕೆ ವಲಯ ಬೆಳವಣಿಗೆಗಾಗಿ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದರೂ ಇಂದಿಗೂ ಒಂದೇ ಒಂದು ಬೃಹತ್ ಕೈಗಾರಿಕೆ ಕಿತ್ತೂರು ಕರ್ನಾಟಕದತ್ತ ಮುಖ ಮಾಡಿಲ್ಲ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸ್ಥಳವಾದ ಬೆಳಗಾವಿ ನಗರದಲ್ಲಿ ಕೈಗಾರಿಕೆಗಳ ಪ್ರಗತಿಗೆ ಸಾಕಷ್ಟು ಅವಕಾಶವಿದೆ. ರಸ್ತೆ, ರೈಲು ಹಾಗೂ ವಿಮಾನ ಸಂಪರ್ಕವೂ ಉತ್ತಮವಾಗಿದೆ. ಅದಕ್ಕೆ ತಕ್ಕಂತೆ ಕೈಗಾರಿಕಾ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಹೀಗಾಗಿ ಬೃಹತ್ ಕಂಪನಿಗಳು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ ಎಂದು ಉದ್ಯಮಿಗಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ಇಲ್ಲದ್ದರಿಂದ ಖಾಸಗಿ ಆಸ್ಪತ್ರೆ ಅವಲಂಬಿಸಬೇಕಿದೆ. ಹೊಸ ಕಟ್ಟಡ ನಿರ್ಮಾಣ ಹೆಸರಿನಲ್ಲಿ ಇಎಸ್‌ಐ ಆಸ್ಪತ್ರೆ ಬಂದ್ ಆಗಿ ಒಂದು ವರ್ಷವಾದರೂ ಕಟ್ಟಡ ಆರಂಭವಾಗಿಲ್ಲ. ಇದರ ಪರಿಣಾಮ ಕಾರ್ಮಿಕರ ಮೇಲಾಗಿದೆ ಎಂದು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.