ಬೆಳಗಾವಿ: ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ) ಪ್ರಾಂಶುಪಾಲ ಎನ್.ಶ್ರೀಕಂಠ ಹೇಳಿದರು. ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ(ಸಿಟಿಇ)ದಲ್ಲಿ ಈಚೆಗೆ ಆಲೂರು ವೆಂಕಟರಾವ ಭಾಷಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ ಮತ್ತು ಭಾಷಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ನೂರಾರು ಭಾಷೆಗಳಿರಬಹುದು. ಆದರೆ, ಕನ್ನಡ ಭಾಷೆಯಷ್ಟು ಪರಂಪರೆ, ಇತಿಹಾಸ ಇನ್ನಾವುದೇ ಭಾಷೆಗಿಲ್ಲ. ಎಲ್ಲ ಭಾಷೆ ಪ್ರೀತಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಪಾರಿ ಬಸವರಾಜ ಮಾತನಾಡಿ, ಭವಿಷ್ಯದ ಶಿಕ್ಷಕರಲ್ಲಿ ಕನ್ನಡ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದರು. ನಾಗರಾಜ ಕಾಳೆ, ಬಸವರಾಜ ಮಾಯಾಚಾರಿ ಇತರರಿದ್ದರು.