ನಕಲಿ ಪ್ರಮಾಣಪತ್ರ ಹಾವಳಿ ನಿಲ್ಲಿಸಿ

ಕಾಗವಾಡ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪಜಾ, ಪಪಂ ಕುಂದು ಕೊರತೆ ಸಭೆಯಲ್ಲಿ ರವೀಂದ್ರ ಹಾದಿಮನಿ, ರಮೇಶ ನಾಯಿಕ, ಪ್ರಕಾಶ ದೊಂಡಾರೆ, ಪರುಶುರಾಮ ಪತ್ತಾರ, ಸಂಜಯ ತಳವಲ್ಕರ ಇತರರಿದ್ದರು.
ಕಾಗವಾಡ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪಜಾ, ಪಪಂ ಕುಂದು ಕೊರತೆ ಸಭೆಯಲ್ಲಿ ರವೀಂದ್ರ ಹಾದಿಮನಿ, ರಮೇಶ ನಾಯಿಕ, ಪ್ರಕಾಶ ದೊಂಡಾರೆ, ಪರುಶುರಾಮ ಪತ್ತಾರ, ಸಂಜಯ ತಳವಲ್ಕರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಮುಖಂಡರ ಆಕ್ರೋಶ
  • ಪಜಾ, ಪಪಂ ಕುಂದು ಕೊರತೆ ಸಭೆ
ಕಾಗವಾಡ: ತಾಲೂಕಿನಲ್ಲಿ ಪರಿಶಿಷ್ಟ ಪಂಗಡಗಳ ನಕಲಿ ಜಾತಿ ಪ್ರಮಾಣಪತ್ರ ವಿತರಣೆ ಹಾವಳಿ ಹೆಚ್ಚಾಗಿದೆ ಎಂದು ವಾಲ್ಮೀಕಿ ಸಮುದಾಯದ ಮುಖಂಡ ರಮೇಶ ನಾಯಿಕ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ೧೨,೦೦೦ಕ್ಕೂ ಅಧಿಕ ನಕಲಿ ಜಾತಿ ಪ್ರಮಾಣಪತ್ರ ವಿತರಿಸಲಾಗಿದೆ. ಇದರಿಂದ ಅರ್ಹರಿಗೆ ದೊರೆಯಬೇಕಿದ್ದ ಸೌಲಭ್ಯ ಅನ್ಯರ ಪಾಲಾಗುತ್ತಿವೆ. ತಕ್ಷಣ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದರು.
ತಹಸೀಲ್ದಾರ್ ರವೀಂದ್ರ ಹಾದಿಮನಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆ ಆಲಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿದೆ. ಸಮಸ್ಯೆ ಪರಿಹರಿಸಿ ಕಾನೂನು ಅರಿವು ಮೂಡಿಸುವುದು, ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಸಭೆ ಉದ್ದೇಶವಾಗಿದೆ ಎಂದರು.
ದಲಿತ ಮುಖಂಡ ಪ್ರಕಾಶ ದೊಂಡಾರೆ ಮಾತನಾಡಿ, ಕಳೆದ ೩೦ ವರ್ಷಗಳಿಂದ ಬಸವ ನಗರದಲ್ಲಿ ಮೂರು ಸಾವಿರಕ್ಕಿಂತ ಅಧಿಕ ಜನ ವಾಸಿಸುತ್ತಿದ್ದರೂ ಹಕ್ಕುಪತ್ರ ನೀಡಿಲ್ಲ. ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಸಂಜಯ ತಳವಲ್ಕರ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಸ್ಮಶಾನ, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ, ಬಸ್ ಹಾಗೂ ಸಮರ್ಪಕ ನೀರಿನ ವ್ಯವಸ್ಥೆ ಸೇರಿ ಮೂಲಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಅಧಿಕಾರಿಗಳ ಮುಂದೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ನಿರ್ಮಾಣವಾದ ಉದ್ವಿಗ್ನ ವಾತಾವರಣವನ್ನು ಪೊಲೀಸರು ನಿಯಂತ್ರಿಸಿದರು.
ತಾಪಂ ಇಒ ವೀರಣ್ಣ ವಾಲಿ, ಬಿಇಒ ಪಾಂಡುರಂಗ ಮದಭಾವಿ, ಸಿಡಿಪಿಒ ರವೀಂದ್ರ ಗುದಗ್ಗೆನ್ನವರ, ಪಪಂ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಸಿಪಿಐ ಸಂತೋಷ ಹಳ್ಳೂರ, ವೈದ್ಯಾಧಿಕಾರಿ ಡಾ.ಬಸನಗೌಡ ಕಾಗೆ, ಲೋಕೋಪಯೋಗಿ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ಸಂಜಯ ತಳವಲ್ಕರ, ಸಚಿನ ಪೂಜಾರಿ, ದೀಪಕ ಕಾಂಬಳೆ, ಜಯಪಾಲ ಬಡಿಗೇರ, ವಿದ್ಯಾಧರ ದೋಂಡರೆ, ಅಶೋಕ ಕಾಂಬಳೆ, ದಯಾನಂದ ಕೆರೂರೆ, ವಿವೇಕ ಕರ್ಪೆ, ವೆಂಕಟೇಶ ಕಾಂಬಳೆ, ವಿಜಯ ಅಸೂದೆ ಇತರರಿದ್ದರು.
"

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಗಳ ಸಮರ್ಪಕ ಜಾರಿ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಸರ್ಕಾರದ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಸಭೆಯಲ್ಲಿ ಚರ್ಚೆಗೆ ಬಂದ ಸಮಸ್ಯೆಗಳನ್ನೂ ಇತ್ಯರ್ಥ ಪಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net