ಸ್ಮಾರ್ಟ್ ಸಿಟಿ ಯೋಜನೆಯಡಿ ಶಹಾಪುರ, ವಡಗಾವಿಯ ಕೆಲ ಪ್ರದೇಶಗಳು ಅಭಿವೃದ್ಧಿಗೊಂಡಿದ್ದರೂ ಇಲ್ಲಿನ ಹಳೇ ಬಡಾವಣೆಗಳಲ್ಲಿ ಸಮರ್ಪಕ ಯೋಜನೆಯ ಕೊರತೆ ಎದ್ದು ಕಾಣುತ್ತಿದೆ. ಮಲಪ್ರಭಾ ನಗರ, ಲಕ್ಷ್ಮೀ ನಗರ, ಬ್ರಹ್ಮ ನಗರ, ಅನ್ನಪೂರ್ಣೇಶ್ವರಿ ನಗರ ಮತ್ತು ಬಾಲಕೃಷ್ಣ ನಗರಗಳಲ್ಲಿ ಜನವಸತಿ ಒಂದೂವರೆ ದಶಕದಿಂದೀಚೆಗೆ ಹೆಚ್ಚು ಬೆಳೆದಿದೆ. ಇಲ್ಲಿ ಸರಿಯಾದ ನಗರ ಯೋಜನೆಯ ಅಡಿಪಾಯವಿಲ್ಲ. ಕಿರಿದಾದ ರಸ್ತೆಗಳಲ್ಲಿ ಬೇಕಾಬಿಟ್ಟಿ ಮನೆ ನಿರ್ಮಾಣಗೊಂಡಿವೆ. ಚರಂಡಿಗಳೇ ಇಲ್ಲದ ಹಲವು ಬೀದಿಗಳಿವೆ. ಭವಿಷ್ಯದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್ ಅಳವಡಿಸುವುದಕ್ಕೂ ಆಸ್ಪದ ಇಲ್ಲದಂತೆ ಜನವಸತಿ ವ್ಯಾಪಿಸಿದೆ. ಎಷ್ಟೋ ಕಡೆ ಗಟಾರು ನಿರ್ಮಾಣಕ್ಕೂ ಜಾಗವಿಲ್ಲದಷ್ಟು ಚಿಕ್ಕ ಓಣಿಗಳಿವೆ. ಸರಾಗವಾಗಿ ಮಳೆ ನೀರು ಬಳ್ಳಾರಿ ನಾಲೆಯತ್ತ ಹರಿದು ಹೋಗಲು ಇಳಿಜಾರೂ ಇಲ್ಲ. ನೀರು ನಿಂತಲ್ಲಿಯೇ ನಿಂತು ಸಮಸ್ಯೆ ಸೃಷ್ಟಿಸುತ್ತಿದೆ. ಆನಂದ ನಗರದಲ್ಲಿ ನಾಲೆ ನೀರು ಸರಾಗವಾಗಿ ಹರಿಯಲು ಹಲವು ಅಡೆತಡೆಗಳಿವೆ. ಇದರಿಂದ ಬಳ್ಳಾರಿ ನಾಲೆ ಸೇರಬೇಕಾದ ಚರಂಡಿ ನೀರು, ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ನುಗ್ಗಿ ಅಧ್ವಾನ ಸೃಷ್ಟಿಸುತ್ತಿದೆ.