ಮನೆಗಳಿಗೆ ನುಗ್ಗುವ ಕೊಳಚೆ ನೀರು

ಬೆಳಗಾವಿಯ ಎಪಿಎಂಸಿ ಮುಖ್ಯ ರಸ್ತೆಯ 6ನೇ ಕ್ರಾಸ್‌ನಲ್ಲಿ ಮನೆಯೊಳಗೆ ಆವರಿಸಿಕೊಂಡಿರುವ ಕೊಳಚೆ ನೀರು.
ಬೆಳಗಾವಿಯ ಎಪಿಎಂಸಿ ಮುಖ್ಯ ರಸ್ತೆಯ 6ನೇ ಕ್ರಾಸ್‌ನಲ್ಲಿ ಮನೆಯೊಳಗೆ ಆವರಿಸಿಕೊಂಡಿರುವ ಕೊಳಚೆ ನೀರು.
Published on

ಪ್ರಮುಖ ಮುಖ್ಯಾಂಶಗಳು

  • ಅವೈಜ್ಞಾನಿಕ ರಸ್ತೆ, ಚರಂಡಿ ನಿರ್ಮಾಣ
  • ನಿವಾಸಿಗಳ ನರಕಯಾತನೆ
ಬೆಳಗಾವಿ: ಇಲ್ಲಿನ ಎಪಿಎಂಸಿ ಮುಖ್ಯ ರಸ್ತೆಯ ಸದಾಶಿವ ನಗರ ಸರ್ಕಾರಿ ಬಾಲಕಿಯರ ವಸತಿ ನಿಲಯ ಪಕ್ಕದ 6ನೇ ಕ್ರಾಸ್ ನಿವಾಸಿಗಳು ಸರಿಯಾಗಿಲ್ಲದ ರಸ್ತೆ ಮತ್ತು ಬಡಾವಣೆಗೆ ನುಗ್ಗುವ ಕೊಳಚೆ ನೀರಿನಿಂದಾಗಿ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಅನೇಕರು ಸ್ವಂತ ಮನೆ ಖಾಲಿ ಮಾಡಿ ಬಾಡಿಗೆ ಮನೆಗಳನ್ನು ಅರಸುತ್ತಿದ್ದಾರೆ.
7-8 ವರ್ಷಗಳ ಹಿಂದೆ ಮಾಡಿದ ಡಾಂಬರು ರಸ್ತೆ ಮೊದಲು ಚೆನ್ನಾಗಿತ್ತು. ಈಚಿನ ವರ್ಷಗಳಲ್ಲಿ ನೆಹರು ನಗರ, ಬುರುಡಗಲ್ಲಿ ಹಾಗೂ ಬಾಲಕಿಯರ ವಸತಿ ನಿಲಯದ ತ್ಯಾಜ್ಯ ನೀರು ಯಾವಾಗ ಈ ಬಡಾವಣೆಯತ್ತ ತಿರುಗಿದೆಯೋ ಆಗಿನಿಂದ ಇವರ ನೆಮ್ಮದಿ ಹಾಳಾಗಿದೆ. ರಸ್ತೆಯ ಒಂದು ಬದಿಗೆ ಮಾತ್ರ ಚರಂಡಿ ವ್ಯವಸ್ಥೆ ಇದೆ. ಆದರೆ ಅಪಾರ ಕೊಳಚೆ ನೀರು ನೇರವಾಗಿ ಬೀದಿಗೆ ಹಾಗೂ ಕೆಲ ಮನೆಗಳಿಗೆ ನುಗ್ಗುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿ ಹೆಚ್ಚು ಹಿರಿಯ ನಾಗರಿಕರೇ ವಾಸಿಸುತ್ತಿದ್ದು, ರಸ್ತೆಯಲ್ಲಿ ಕಾಲಿಡುವುದಕ್ಕೆ ಹಿಂಜರಿಯುತ್ತಿದ್ದಾರೆ.
ಸರ್ಕಾರಿ ಬಾಲಕಿಯರ ವಸತಿ ನಿಲಯದಿಂದ 12 ಪೈಪ್‌ಗಳನ್ನು ಅಳವಡಿಸಿ, ಹಿಂಭಾಗದ ಚರಂಡಿಗೆ ಬಿಟ್ಟಿದ್ದಾರೆ. ಇಲ್ಲಿಂದ ಬೆಳಗಿನ ಹೊತ್ತು ಏಕಕಾಲಕ್ಕೆ ಮಳೆ ನೀರಿನಂತೆ ಈ ಬೀದಿಗೆ ತ್ಯಾಜ್ಯ ನೀರು ನುಗ್ಗುತ್ತಿದೆ. ಮೇಲ್ಭಾಗದ ಜನವಸತಿ ಪ್ರದೇಶದ ನೀರು ಇದರೊಂದಿಗೆ ಸೇರಿಕೊಳ್ಳುತ್ತಿದೆ. ಈಗಾಗಲೇ ನೆಲಮಹಡಿಗೆ ನೀರು ನುಗ್ಗಿದ್ದರಿಂದ ಬಸೀರ್‌ಸಾಬ್ ಮುಜಾವರ ಕುಟುಂಬ ಮನೆ ಖಾಲಿ ಮಾಡಿ, ಬಾಡಿಗೆ ಕೊಡಲುಕಟ್ಟಿಸಿದ್ದ ಮೊದಲ ಮಹಡಿಯ ಮನೆ ಸೇರಿದ್ದಾರೆ. ಸುತ್ತಲಿನ 8 ಮನೆಗಳವರು ಈಗಾಗಲೇ ಖಾಲಿ ಮಾಡಿ ಹೋಗಿದ್ದಾರೆ.

ನಮ್ಮ ಮನವಿಗೆ ಕೇವಲ ಭರವಸೆ ಸಿಗುತ್ತಿದೆ ಹೊರತು ಈ ನರಕಯಾತನೆಯಿಂದ ಮುಕ್ತಿ ಸಿಕ್ಕಿಲ್ಲ. ನೆಮ್ಮದಿಯಿಂದ ಇರುವುದಕ್ಕಾಗಿ ಕಟ್ಟಿಸಿಕೊಂಡ ಮನೆ ಖಾಲಿ ಮಾಡಿ ಬೇರೆ ಕಡೆ ಹೋಗುವ ಸ್ಥಿತಿ ಬಂದಿದೆ. ಈಗ ಮೇಲ್ಭಾಗದಲ್ಲಿ ಹೊಸ ಬಹುಮಹಡಿ ಕಟ್ಟಡ, ಅಪಾರ್ಟಮೆಂಟ್‌ಗಳು ತಲೆ ಎತ್ತುತ್ತಿವೆ. ಇಲ್ಲೂ ಜನವಸತಿ ಬಂದಲ್ಲಿ ನಮ್ಮ ಬಡಾವಣೆ ಸಂಪೂರ್ಣ ಕೊಳಚೆ ನೀರಿನಲ್ಲಿ ಮುಳುಗಿ ಹೋಗುತ್ತದೆಂಬ ಆತಂಕ ಕಾಡುತ್ತಿದೆ.

— ಶೇಖ್ ಅಬ್ದುಲ್ ನಜೀರಸಾಬ್ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net