ಕೊಟ್ಟಲಗಿ: ಅಧಿಕಾರ, ಆಸ್ತಿ, ಅಂತಸ್ತು ಯಾವುದೂ ಶಾಶ್ವತವಲ್ಲ. ನಿಸ್ವಾರ್ಥ ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಉದ್ಘಾಟನಾ ಸಮಾರಂಭಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ರೈತರಲ್ಲಿ ಆರ್ಥಿಕ ಶಕ್ತಿ ತುಂಬಿದ ತೃಪ್ತಿಯಿದೆ. ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯ ಅತಿ ಶೀಘ್ರದಲ್ಲೇ ಪೂರ್ಣಗೊಂಡು, ರೈತರ ಭೂಮಿಗೆ ನೀರು ಹರಿಯಲಿದೆ ಎಂದರು.
ಅಥಣಿ ಕ್ಷೇತ್ರವನ್ನು ರಾಜ್ಯದಲ್ಲೆ ಮಾದರಿ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ. ಕೃಷಿಕರಿಗೆ ಮೊದಲ ಆದ್ಯತೆ ಸಿಗಬೇಕು. ಪ್ರತಿಯೊಬ್ಬರೂ ದನ-ಕರು ಸಾಕಿ, ಹೈನುಗಾರಿಕೆ ಉಪಕಸುಬಾಗಿ ಮಾಡಿಕೊಂಡರೆ ಆರ್ಥಿಕ ಸ್ವಾವಲಂಬನೆ ಸಾಽಸಲು ಸಾಧ್ಯ. ಪಶು ಚಿಕಿತ್ಸಾಲಯ ಪಶುಗಳ ಆರೋಗ್ಯ ರಕ್ಷಣೆಗೆ ವರದಾನವಾಗಲಿವೆ. ರೈತರಿಗೆ ಉತ್ತಮ ರಸ್ತೆ, ಗುಣಮಟ್ಟದ ಶಿಕ್ಷಣ, ನೀರು, ವಿದ್ಯುತ್ ಸೌಕರ್ಯ ಸಮರ್ಪಕವಾಗಿ ನೀಡಿದರೆ ಸರ್ಕಾರಕ್ಕೆ ಸಾಲ ನೀಡುವ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸಿದರಾಯ ಯಲ್ಲಡಗಿ, ವಿನಾಯಕ ಬಾಗಡೆ, ಶಿವಾನಂದ ಗೋಲಬಾವಿ, ದಾನೇಶ್ವರ ಕಾಂಬಳೆ, ಕುಮದಿನಿ ಶಿವಣಗೋಳ, ಅಪ್ಪಾಸಾಬ ಬಿರಾದರ, ಗುರುಬಸು ಬಂಡರಗೊಟ್ಟಿ, ರವಿ ಹಂಜಿ, ಶಿವಾನಂದ ತೇಲಿ, ಸುರೇಶ ಖಡಕಿ, ಸಿದ್ದು ದೊಡ್ಡನಿಂಗಪ್ಪಗೋಳ, ಸತೀಶ ಉಪಾಸೆ, ರಘು ದೊಡ್ಡನಿಂಗಪ್ಪಗೋಳ ಇತರರಿದ್ದರು.