ಅಥಣಿ: ತಾಲೂಕಿನ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಸಂಕಲ್ಪ ಹೊಂದಲಾಗಿದ್ದು, ಮೊದಲ ಹಂತವಾಗಿ ೫೦ ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ನ.೩ರಂದು ಬೆಳಗ್ಗೆ ೩ ಗಂಟೆಗೆ ನೆರವೇರಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪೂರ್ವಸಿದ್ಧತೆ ಕುರಿತು ಚರ್ಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸರ್ಕಾರ ಮೊದಲ ಹಂತದ ೫೦ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ೨೧.೨೯ ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಎರಡನೆಯ ಹಂತದಲ್ಲಿ ೮.೭೨ ಕೋಟಿ ರೂ. ಮಂಜೂರು ಮಾಡಲಿದ್ದು, ಒಟ್ಟು ೩೦.೦೧ ಕೋಟಿ ರೂ. ವೆಚ್ಚದಲ್ಲಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಹೇಳಿದರು.
ಶಂಕು ಸ್ಥಾಪನೆ ಸಮಾರಂಭಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ ಸೇರಿ ಅನೇಕ ಗಣ್ಯರು ಆಗಮಿಸಲಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಶಿಷ್ಟಾಚಾರದಂತೆ ಜಿಲ್ಲೆಯ ಸಚಿವರಿಗೆ ಮತ್ತು ಎಲ್ಲ ಶಾಸಕರನ್ನು ಆಮಂತ್ರಿಸಲಾಗಿದೆ. ಕಾರ್ಯಕ್ರಮದ ಸಿದ್ಧತೆಗಾಗಿ ಅಽಕಾರಿಗಳಿಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ ಎಂದರು.
ತಹಸೀಲ್ದಾರ್ ಸಿದ್ದರಾಯ ಬೋಸಗಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಬಿಇಒ ಎಂ.ಆರ್.ಮುಂಜೆ, ಸಿಡಿಪಿಒ ಮಂಜುನಾಥ, ಸಿಪಿಐ ಸಂತೋಷ ಹಳ್ಳೂರ, ಹೆಸ್ಕಾಂ ಅಽಕಾರಿ ಜಿ.ವಿ.ಸಂಪನ್ನವರ ಇತರರು ಇದ್ದರು.