ಅಥಣಿ: ಇಂದಿನ ವೇಗದ ಬದುಕಿನಲ್ಲಿ ಮನಸ್ಸಿನ ನೆಮ್ಮದಿ ಕಳೆದುಕೊಂಡು ಅನಾರೋಗ್ಯ ಸ್ಥಿತಿ ನಿರ್ಮಿಸಿಕೊಳ್ಳುತ್ತಿದ್ದೇವೆ. ದಿನದ ಒಂದು ಗಂಟೆಯಾದರು ಮಹಾತ್ಮರ ಚರಿತ್ರೆ ಓದುವುದು ಹಾಗೂ ಧಾರ್ಮಿಕ ಚಿಂತನೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದು ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು.
ಮೋಟಗಿಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ೨೮೪ನೇ ಭಾವೈಕ್ಯ ಬೆಳದಿಂಗಳು ಕಾರ್ಯಕ್ರಮ ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಯೋಗ, ಧ್ಯಾನ, ಸಂಗೀತದ ಮೂಲಕ ಮನಸ್ಸನ್ನು ಶಾಂತವನ್ನಾಗಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಮಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯಲ್ಲಿ ಬದುಕಿನ ಆನಂದ ಕಾಣಬಹುದು. ಇದನ್ನೆ ಬಸವಾದಿ ಶಿವಶರಣರು ತಮ್ಮ ಕಾಯಕದೊಂದಿಗೆ ೧೨ನೇ ಶತಮಾನದಲ್ಲಿ ವಚನಗಳನ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಶಾಂತವಾಗಿರಲು ಆಧ್ಯಾತ್ಮಿಕ ಚಿಂತನೆ, ಗುಣಾತ್ಮಕ ವಿಚಾರ ಅಳವಡಿಸಿಕೊಳ್ಳಬೇಕು ಎಂದರು.
ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಹಾಸ ದಾತಾರ, ಮಹಾದೇವಪ್ಪ ಕಮ್ಮಾರ, ದಿಲೀಪ ಲೋನಾರೆ, ನಚಿಕೇತ ಕಾಥವಟೆ, ಸುರೇಶ ಚಿಕ್ಕಟ್ಟಿ, ಶಂಕರ ಹಗಲಂಬಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಮುಕ್ತಾಯಿ ಮಹಿಳಾ ಬಳಗದವರಿಂದ ವಚನ ಸಂಗೀತ ಜರುಗಿತು.