ರಾಹುಲ್ ಗಾಂಧಿ ಅಪಕ್ವ ನಡವಳಿಕೆ

ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಭಾಸ ಪಾಟೀಲ, ಗೀತಾ ಸುತಾರ, ಹಣಮಂತ ಕೊಂಗಾಲಿ ಇದ್ದಾರೆ.
ಬೆಳಗಾವಿಯಲ್ಲಿ ಸಂಸದ ಜಗದೀಶ ಶೆಟ್ಟರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಭಾಸ ಪಾಟೀಲ, ಗೀತಾ ಸುತಾರ, ಹಣಮಂತ ಕೊಂಗಾಲಿ ಇದ್ದಾರೆ.
Published on
ಬೆಳಗಾವಿ: ಸಂಸತ್ತಿನ ನಿಯಮಾವಳಿ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅಪಕ್ವ ನಡವಳಿಕೆಯಿಂದ ಕಾಂಗ್ರೆಸ್ಸಿಗರೇ ಬೇಸರಗೊಳ್ಳುವಂತಾಗಿದೆ ಎಂದು ಸಂಸದ ಜಗದೀಶ ಶೆಟ್ಟರ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಈಚೆಗೆ ಯಶಸ್ವಿಯಾದ ಕೃತಕ ಬುದ್ಧಿಮತ್ತೆ(ಎಐ) ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅನೇಕ ರಾಷ್ಟ್ರಗಳೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಸಕಾರಾತ್ಮಕ ಬೆಳವಣಿಗೆ ಸಹಿಸಿಕೊಳ್ಳದೆ ರಾಹುಲ್ ಗಾಂಧಿ ಅವರು ಹದಿನೈದು ಹುಡುಗರನ್ನು ಶೃಂಗಸಭೆಯೊಳಗೆ ಬಿಟ್ಟು ಗಲಾಟೆ ಮಾಡಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್‌ನ ಹೊಸ ಸಂಸದರು ಎಷ್ಟೋ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕಿದೆ. ಆದರೆ, ವಿಷಯಾಧಾರಿತ ಚರ್ಚೆ ಬಿಟ್ಟು ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ. ನರೇಗಾ ತಿದ್ದುಪಡಿ ಬಗ್ಗೆ ಹೊರಗಡೆ ಆರೋಪ ಮಾಡುವವರು ಸಂಸತ್ತಿನಲ್ಲಿ ಚರ್ಚೆ ಮಾಡಲಿಲ್ಲ ಎಂದರು.
ತುಷ್ಟೀಕರಣ ರಾಜಕಾರಣ: ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ಪೂರ್ವಯೋಜಿತವಾಗಿ ಕಲ್ಲು ಎಸೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಹಿಂದೂ-ಮುಸ್ಲಿಂ ಕೋಮು ಗಲಭೆಗಳು ಹೆಚ್ಚಾಗುತ್ತವೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಈ ಪ್ರಕರಣಕ್ಕೆ ಕಾರಣರಾದವರನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಬೆಳಗಾವಿ-ಧಾರವಾಡ ರೈಲು ಮಾರ್ಗ ಕಾಮಗಾರಿಗೆ ಭೂಸ್ವಾಧೀನ ದೊಡ್ಡ ಸಮಸ್ಯೆಯಾಗಿದೆ. ಧಾರವಾಡದಲ್ಲಿ ಸಂತೋಷ ಲಾಡ್ ಅಡತಡೆಯಿಂದ 60 ಎಕರೆ ಭೂಸ್ವಾಧೀನ ನಿಂತಿದೆ. ಭೂಸ್ವಾಧೀನಕ್ಕೆ ಕೊಡಲು ಇವರಲ್ಲಿ ಹಣವಿಲ್ಲ. ಹೀಗಾಗಿ ರಾಜ್ಯದಲ್ಲಿ ಅನೇಕ ಯೋಜನೆ ನಿಂತಿವೆ. ಬೆಳಗಾವಿ-ಪುಣೆ-ಮುಂಬೈ ಹೈಸ್ಪೀಡ್ ಕಾರಿಡಾರ್‌ಗೆ ರೈಲ್ವೆ ಸಚಿವರಲ್ಲಿ ಬೇಡಿಕೆ ಇಟ್ಟಿದ್ದೇನೆ. ಕೆಲ ದಿನಗಳಲ್ಲಿ ಘೋಷಣೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ, ನಗರ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಸಂತೋಷ ದೇಶನೂರ ಇದ್ದರು.

ಶೀಘ್ರ ಮನೆ ನಿರ್ಮಾಣ

ಪೂರ್ಣ ಪ್ರಮಾಣದಲ್ಲಿ ಬೆಳಗಾವಿ ಜನತೆಗೆ ಸಿಗುವುದಕ್ಕಾಗಿ ಇಲ್ಲಿಯೇ ಮನೆ ಮಾಡುವುದಾಗಿ ಈ ಹಿಂದೆ ಹೇಳಿದ್ದೆ. ಈಗ ಸೈಟ್ ತೆಗೆದುಕೊಂಡಿದ್ದೇವೆ. ಶೀಘ್ರ ಮನೆ ನಿರ್ಮಾಣ ಆರಂಭಿಸುತ್ತೇವೆ ಎಂದು ಸಂಸದ ಶೆಟ್ಟರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net