ಉತ್ತರದ ಉದ್ದಿಮೆ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸಿ

ಉತ್ತರ ಬೆಳಗಾವಿ ಕೈಗಾರಿಕಾ ಸಂಘ ಸಭೆಯಲ್ಲಿ ಶಿವಕುಮಾರ ಎನ್.ಜೆ., ನಾಗೇಂದ್ರ ಮೂರ್ತಿ, ಬೊನವೆಂಚರ ಪಿಂಟೋ, ಸಂತೋಷ ಕೆಲಗೇರಿ, ಅಜಿತ ಪಾಟೀಲ, ಅಮಿತ ಬಾಗ್ರಿ, ಧೀರಜ ಕಾಂಚನ ಇತರರಿದ್ದರು.
ಉತ್ತರ ಬೆಳಗಾವಿ ಕೈಗಾರಿಕಾ ಸಂಘ ಸಭೆಯಲ್ಲಿ ಶಿವಕುಮಾರ ಎನ್.ಜೆ., ನಾಗೇಂದ್ರ ಮೂರ್ತಿ, ಬೊನವೆಂಚರ ಪಿಂಟೋ, ಸಂತೋಷ ಕೆಲಗೇರಿ, ಅಜಿತ ಪಾಟೀಲ, ಅಮಿತ ಬಾಗ್ರಿ, ಧೀರಜ ಕಾಂಚನ ಇತರರಿದ್ದರು.
Published on
ಬೆಳಗಾವಿ : ಹೊನಗಾ, ಕಾಕತಿ ಹಾಗೂ ಕಂಗ್ರಾಳಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಕೈಗಾರಿಕಾ ಆಸ್ತಿಗಳ ಮಾಲೀಕತ್ವದ ದಾಖಲೆಗಳ ಸಮಸ್ಯೆ ಸೇರಿದಂತೆ ಹಲವು ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸುವಂತೆ ಉತ್ತರ ಬೆಳಗಾವಿ ಕೈಗಾರಿಕಾ ಸಂಘ (ಎನ್‌ಬಿಐಎ) ಆಗ್ರಹಿಸಿದೆ.
ಗುರುವಾರ ಸಂಘದ ಅಧ್ಯಕ್ಷ ಶಿವಕುಮಾರ ಎನ್.ಜೆ. ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಸಂಘವು 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರು ಹಾಗೂ 300ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳನ್ನು ಪ್ರತಿನಿಧಿಸುತ್ತಿದ್ದು, 5 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ನೇರ ಉದ್ಯೋಗ ಒದಗಿಸುತ್ತಿವೆ ಎಂದು ತಿಳಿಸಿದೆ.
ಹೊನಗಾ ಕೈಗಾರಿಕಾ ಪ್ರದೇಶದ ರಸ್ತೆಗಳ ಸ್ಥಿತಿ ಅತ್ಯಂತ ಹದಗೆಟ್ಟಿದೆ. 15 ವರ್ಷಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಹಲವು ಕಡೆ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿಗೆ. ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅಪಾಯ ಎದುರಾಗಿದೆ. ಚರಂಡಿ ವ್ಯವಸ್ಥೆ, ಪೈಪ್‌ಲೈನ್‌ಗಳಿಂದ ರಸ್ತೆಗೆ ನೀರು ಸೋರಿಕೆ ಹಾಗೂ ಸಮರ್ಪಕ ಬೀದಿದೀಪಗಳ ಕೊರತೆ ಇದೆ. ಕೇಬಲ್, ಪೈಪ್‌ಲೈನ್ ಹಾಗೂ ಗ್ಯಾಸ್‌ಲೈನ್ ಅಳವಡಿಕೆಗಾಗಿ ವಿವಿಧ ಏಜೆನ್ಸಿಗಳು ಪದೇಪದೇ ರಸ್ತೆಗಳನ್ನು ಅಗೆದು ಹಾಕುತ್ತಿದ್ದು, ಕಾಮಗಾರಿ ಬಳಿಕ ಸಮರ್ಪಕವಾಗಿ ಸರಿಪಡಿಸುತ್ತಿಲ್ಲ. ಈ ಬಗ್ಗೆ ಕೆಐಎಡಿಬಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ಸಮಸ್ಯೆಗಳನ್ನು ತಂದಿದ್ದರೂ, ನಿರೀಕ್ಷಿತ ಪರಿಹಾರ ದೊರೆತಿಲ್ಲ ಎಂದು ಪದಾಧಿಕಾರಿಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕೈಗಾರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರೂ ಶೇ.50ಕ್ಕೂ ಹೆಚ್ಚು ಉದ್ದಿಮೆಗಳ ಬಳಿ ಮಾಲೀಕತ್ವದ ದಾಖಲೆಗಳಿಲ್ಲ. ಇದರಿಂದ ಕೈಗಾರಿಕೆಗಳ ವಿಸ್ತರಣೆ, ಹೂಡಿಕೆ ಹಾಗೂ ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಹೊಸ ಹೂಡಿಕೆಗಳನ್ನು ಆಹ್ವಾನಿಸುವ ಜತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳ ಸಮಸ್ಯೆಗಳಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಸಂಬಂಧಿಸಿದ ಸಚಿವರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘದ ಕಾರ್ಯದರ್ಶಿ ನಾಗೇಂದ್ರ ಮೂರ್ತಿ, ಉಪಾಧ್ಯಕ್ಷ ಬೊನವೆಂಚರ ಪಿಂಟೋ, ಖಜಾಂಚಿ ಸಂತೋಷ ಕೆಲಗೇರಿ, ಆಡಳಿತ ಮಂಡಳಿ ಸದಸ್ಯರಾದ ಅಜಿತ ಪಾಟೀಲ, ಅಮಿತ ಬಾಗ್ರಿ, ಧೀರಜ ಕಾಂಚನ, ಅಮೃತ ಕೋಡಾ, ಸುಧೀರ ದಾರೇಕರ, ಮೋಹನ ರಡ್ಡಿ, ದಯಾನಂದ ಧೋಂಗಡಿ ಹಾಗೂ ಹಶಮ್ ಸಯ್ಯದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net