ಅಭಿವೃದ್ಧಿಗೆ ಅನುದಾನ ನೀಡಿ, ಖಾಲಿ ಹುದ್ದೆ ಭರ್ತಿ ಮಾಡಿ

 ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಆಯುಕ್ತೆ ಗೀತಾ ಕೌಲಗಿ ಅವರಿಗೆ ಮೇಯರ್‌ ಪ್ರೀತಿ ಕಾಮಕರ್‌, ಉಪಮೇಯರ್‌ ಹಣುಮಂತ ಕೊಂಗಾಲಿ ಹಾಗೂ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು
ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಆಯುಕ್ತೆ ಗೀತಾ ಕೌಲಗಿ ಅವರಿಗೆ ಮೇಯರ್‌ ಪ್ರೀತಿ ಕಾಮಕರ್‌, ಉಪಮೇಯರ್‌ ಹಣುಮಂತ ಕೊಂಗಾಲಿ ಹಾಗೂ ಪಾಲಿಕೆ ಸದಸ್ಯರು ಮನವಿ ಸಲ್ಲಿಸಿದರು
Published on
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವುದು, ಪಾಲಿಕೆಯಲ್ಲಿ ಖಾಲಿ ಇರುವ ಅಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಹಾನಗರ ಪಾಲಿಕೆ ಮೇಯರ್‌ ಪ್ರೀತಿ ಕಾಮಕರ್‌, ಉಪಮೇಯರ್‌ ಹಣುಮಂತ ಕೊಂಗಾಲಿ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಸೋಮವಾರ ಪ್ರಾದೇಶಿಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಮುಂದುವರಿದಿದ್ದು, ಇದರಿಂದ ಆಡಳಿತಾತ್ಮಕ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. 2023ರಲ್ಲಿ ಅಧಿಕಾರಕ್ಕೆ ಬಂದ ಬಳಿಕದಿಂದಲೇ ಪಾಲಿಕೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ನಿರಂತರವಾಗಿ ಮನವಿ ಸಲ್ಲಿಸಲಾಗುತ್ತಿದೆ. ಆದರೂ ಈವರೆಗೆ ಸಮರ್ಪಕ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯ ಪರಿಷತ್ ಕಾರ್ಯದರ್ಶಿ ಹುದ್ದೆಗೆ ಕಾಯಂ ಅಧಿಕಾರಿಯನ್ನು ನೇಮಕ ಮಾಡದಿರುವುದರಿಂದ ಪ್ರಭಾರ ಕಾರ್ಯದರ್ಶಿಗಳ ಮೂಲಕ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪರಿಷತ್ ಸಭೆಗಳ ನಿರ್ವಹಣೆ ಹಾಗೂ ಆಡಳಿತಾತ್ಮಕ ಕೆಲಸಗಳಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಜನರಿಗೆ ಯಾವುದೇ ತೊಂದರೆಯಾಗದಂತೆ ಪಾಲಿಕೆ ವತಿಯಿಂದ ಇ-ಆಸ್ತಿ, ಪಿಐಡಿ ಸೇರಿದಂತೆ ವಿವಿಧ ನಾಗರಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಸೇವೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಸವಾಲಾಗಿದೆ ಎಂದು ಸದಸ್ಯರು ತಿಳಿಸಿದರು.

ಇದೇ ವೇಳೆ, ಪಾಲಿಕೆಗೆ ನೀಡಲಾಗುತ್ತಿರುವ ಎಸ್‌ಎಫ್‌ಸಿ ವೇತನ ಅನುದಾನವನ್ನು ಸರ್ಕಾರ ಕಡಿತಗೊಳಿಸುತ್ತಿರುವುದರಿಂದ ಪಾಲಿಕೆಯ ಹಣಕಾಸಿನ ಮೇಲೂ ಒತ್ತಡ ಉಂಟಾಗಿದೆ . ಸಿಬ್ಬಂದಿಯ ವೇತನ ಸೇರಿದಂತೆ ಅಗತ್ಯ ಆಡಳಿತಾತ್ಮಕ ವೆಚ್ಚಗಳನ್ನು ನಿರ್ವಹಿಸಲು ಸಮರ್ಪಕ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದ 15ನೇ ಹಣಕಾಸು ಯೋಜನೆಯಡಿ ಪಾಲಿಕೆಗೆ ₹18 ಕೋಟಿ ಅನುದಾನ ದೊರೆಯುತ್ತಿದೆ. ಅಲ್ಲದೆ, 16ನೇ ಹಣಕಾಸು ಯೋಜನೆಯಡಿ ₹34 ಕೋಟಿ ಅನುದಾನ ನೀಡಿರುವುದು ಪಾಲಿಕೆಯ ಅಭಿವೃದ್ಧಿಗೆ ಸರ್ಕಾರದ ಸಹಕಾರವನ್ನು ತೋರಿಸುತ್ತದೆ. ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲೂ ನಗರ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸದಸ್ಯರು ಮನವಿ ಮಾಡಿದರು.

ನಗರದ ಮೂಲಸೌಕರ್ಯ, ರಸ್ತೆ, ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ಇದಕ್ಕಾಗಿ ಪಾಲಿಕೆಗೆ ನಿರಂತರವಾಗಿ ಅನುದಾನ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಐದು ತಿಂಗಳಲ್ಲಿ ಮೂರು ಸಭೆ; ಹಲವು ಗೊತ್ತುವಳಿ

ಆದರೆ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಸಭೆಗಳಿಗೆ ಅಧಿಕಾರಿಗಳು ಗೈರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಾಯಿ ಸಮಿತಿಯ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಗಡಿ ವಿವಾದದ ವಿಚಾರದಲ್ಲೂ ಸ್ಪಷ್ಟ ನಿರ್ದೇಶನಕ್ಕೆ ಒತ್ತಾಯ

ಆದರೆ, ಈವರೆಗೆ ಇಲಾಖೆಯಿಂದ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ. ಈ ವಿಷಯದಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ವಿಳಂಬ ಮಾಡುತ್ತಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯ ನಿರ್ಣಯಗಳು ಹಾಗೂ ಕನ್ನಡಪರ ಸಂಘಟನೆಗಳ ಮನವಿಗಳ ಕುರಿತು ಶೀಘ್ರ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಪಾಲಿಕೆಯ ಆಡಳಿತವನ್ನು ಬಲಪಡಿಸಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಕಾಯಂ ಅಧಿಕಾರಿಗಳ ನೇಮಕ, ಎಸ್‌ಎಫ್‌ಸಿ ವೇತನ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡುವುದು, ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರದ ಜನಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಪಾಲಿಕೆಗೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸಿದರೆ ಸಾರ್ವಜನಿಕರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆಯ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net