

ಬೆಳಗಾವಿ :ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆಯಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಸಂಪೂರ್ಣ ರಾಜ್ಯವನ್ನು ಬರಪೀಡಿತವೆಂದು ಘೋಷಿಸಿ, ಎಕರೆಗೆ 50 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂಬುದು ಸೇರಿದಂತೆ ವಿವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.
ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ‌್ಯಾಲಿ ಮೂಲಕ ತೆರಳಿದ ರೈತರು, ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ಹಾಗೂ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇಡೀ ರಾಜ್ಯದಲ್ಲೇ ಬರ ಆವರಿಸಿದೆ. ಹೀಗಾಗಿ ಕೆಲ ತಾಲೂಕುಗಳನ್ನು ಮಾತ್ರ ಬರ ಎಂದು ಪರಿಗಣಿಸದೇ ಸಂಪೂರ್ಣ ಕರ್ನಾಟಕ ಬರಪೀಡಿತ ಎಂದು ಘೋಷಣೆಯಾಗಬೇಕು. 2025-26ನೇ ಸಾಲಿನ ಬೆಳೆ ಹಾನಿಯ ಸಮೀಕ್ಷೆಯನ್ನು ಕೂಡಲೇ ಪರಿಗಣನೆಗೆ ತೆಗೆದುಕೊಂಡು ಪರಿಹಾರ ಘೋಷಿಸಬೇಕು. ಅನಿಯಮಿತ ವಿದ್ಯುತ್ ಲೋಡ್‌ಶೆಡ್ಡಿಂಗ್ ತಕ್ಷಣ ನಿಲ್ಲಿಸಬೇಕು. ಹಗಲಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗಬೇಕು. ಬೆಳಗಾವಿ ಎಪಿಎಂಸಿಯಲ್ಲಿನ ಕೃಷಿ ಉತ್ಪನ್ನಗಳ ದರ ಕುಸಿತ ಹಾಗೂ ರೈತರಿಂದ ಕಮೀಷನ್ ಪಡೆಯುವ ಹಾವಳಿ ತಡೆಯಬೇಕು. 2026-27ನೇ ಸಾಲಿನ ಕಬ್ಬು ದರವನ್ನು ವೈಜ್ಞಾನಿಕವಾಗಿ ನಿಗದಿ ಮಾಡಬೇಕು. ಸರ್ಕಾರದ ಆದೇಶದಂತೆ ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ರಾಜ್ಯ ಅಧ್ಯಕ್ಷ ಸಿದಗೌಡ ಮೋದಗಿ, ಸಂಜೀವ ಡೊಂಗರಗಾವಿ, ಶಿವಶಂಕರ ಪೂಜಾರ, ಮಲ್ಲಿಕಾರ್ಜುನ ಮುಗಪ್ಪಗೋಳ, ಅರ್ಜುನ ಗವಡಾ, ರಮೇಶ, ರಾ.ಬ.ಪಾಟೀಲ, ಮಲ್ಲನಗೌಡ ಪಾಟೀಲ, ಎಸ್.ಬಿ.ಬಡಸದ ಇತರರಿದ್ದರು.