ಅಥಣಿ ಗ್ರಾಮೀಣ:ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯವಾಗಬೇಕಾದರೆ ಸರ್ಕಾರದ ಜತೆಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ದರೂರ ಗ್ರಾಮದ ಹೊರವಲಯದಲ್ಲಿ ಮಹಾವೀರನಗರ ಹಳ್ಳದ ಬಳಿ ಕರ್ನಾಟಕ ನೀರಾವರಿ ನಿಗಮ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ೨ ಕೋಟಿ ರೂ. ವೆಚ್ಚದಲ್ಲಿ ದರೂರ ಗ್ರಾಮದಿಂದ ಖವಟಕೊಟ್ಟ ಗ್ರಾಮದವರೆಗಿನ ಸವಳು-ಜವಳು ನಾಲೆ ಸ್ವಚ್ಛಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದ ಜಮೀನುಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ನೀರಿನ ಬಳಕೆಯಿಂದ ಸವಳು-ಜವಳಾಗಿ ಮಾರ್ಪಟ್ಟಿವೆ. ಬರಡಾಗಿರುವ ಭೂಮಿಯನ್ನು ಫಲವತ್ತಾಗಿಸುವ ನಿಟ್ಟಿನಲ್ಲಿ ನಾಲೆ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕೆ ಒಳಪಡುವ ಜಮೀನುಗಳ ಪ್ರತಿ ರೈತರು ಗುತ್ತಿಗೆದಾರರಿಗೆ ಸಹಕರಿಬೇಕು. ಅಥಣಿ ಕ್ಷೇತ್ರದ ಅಭಿವೃದ್ಧಿ, ರಸ್ತೆ, ಕುಡಿಯುವ ನೀರು ಹಾಗೂ ಹಳ್ಳಗಳಿಗೆ ನಾಲಾ ಬಾಂದಾರ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ದರೂರ-ಸಿದ್ದಾಪುರ ಮಾರ್ಗದ ರಸ್ತೆಗೆ ೪ ಕೋಟಿ ರೂ., ಖವಟಕೊಪ್ಪ-ದರೂರ ಸಂಪರ್ಕ ರಸ್ತೆಗೆ ೩ ಕೋಟಿ ರೂ.ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಕೈಗೊಳ್ಳಲಾಗುವುದು. ಕೊಟ್ಟಲಗಿ ಅಮ್ಮಾಜೇಶ್ವರಿ ಏತನೀರಾವರಿ ಕಾಮಗಾರಿ ಶೇ.೮೦ ಮುಗಿದಿದದೆ. ಗುತ್ತಿಗೆದಾರರು ಉತ್ತಮ ಕಾಮಗಾರಿ ಕೈಗೊಂಡು ಬೇಗ ಪೂರ್ಣಗೊಳಿಸಬೇಕು ಎಂದರು.
ಮುಖಂಡ ಸುರೇಶ ಮಾಯಣ್ಣವರ ಮಾತನಾಡಿ, ಕೃಷ್ಣಾ ನದಿ ದಡದ ಸವಳು-ಜವಳು ಭೂಮಿ ನಿರ್ಮೂಲನೆಗೆ ಶಾಸಕ ಲಕ್ಷ್ಮಣ ಸವದಿ ಪಣತೊಟ್ಟಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಸವಳು-ಜವಳು ಕಾಮಗಾರಿಯಷ್ಟೇ ಅಲ್ಲ. ಶಿಕ್ಷಣ, ನೀರಾವರಿ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಆದರೆ, ಕೆಲ ನಾಯಕರು ಇದು ನಮ್ಮ ಸಾಧನೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದರು.