ಪಾಶ್ಚಾಪುರ ಗ್ರಾಮದಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಎಲ್ಲ ಸಮುದಾಯದವರು ಒಗ್ಗೂಡಿ ಗುರುರಾಯರ ಆರಾಧನಾ ಮಹೋತ್ಸವ ನೆರವೇರಿಸಿದ ಕಾರ್ಯ ಮಾದರಿಯಾಗಿದೆ ಎಂದು ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ಸಮೀಪದ ಪಾಶ್ಚಾಪುರ ಗ್ರಾಮದಲ್ಲಿ ಗುರುರಾಯರ ಆರಾಧನಾ ಮಹೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಗೋಪೂಜೆ ಹಾಗೂ ಕುಂಭ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ನಿತ್ಯದ ಬದುಕಿನ ಒತ್ತಡ ಮಧ್ಯೆಯೂ ಆಧ್ಯಾತ್ಮಿಕ, ಸತ್ಸಂಗಗಳಲ್ಲಿ ಭಾಗಿಯಾಗಿ ಸೇವಾ ಕಾರ್ಯ ಮಾಡಬೇಕು. ಸಮಾಜದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಕಾರ್ಯ ಮಾಡಿರುವ ಸೇವಾ ಸಮಿತಿ ಕಾರ್ಯ ಶ್ಲಾಘನೀಯ ಎಂದರು.
ಗುರುರಾಯರ ಪಲ್ಲಕ್ಕಿ ಉತ್ಸವ ಹಾಗೂ ಕುಂಭ ಮೆರವಣಿಗೆ ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವೀರೇಶ ತುಮಕೂರ ಸಂಗಡಿಗರು ವೀರಭದ್ರ ಕುಣಿತ ಪ್ರದರ್ಶಿಸಿದರು.