

ನಗರದ ಸಂಚಾರ ಸಿಕ್ಕು(ದಟ್ಟಣೆ) ನಿಯಂತ್ರಿಸಲು, ಸಗಮ ಸಂಚಾರಕ್ಕಾಗಿ ಜಾರಿಗೆ ತಂದಿರುವ ಸಮ ಮತ್ತು ಬೆಸ ದಿನಾಂಕಗಳ ಆಧಾರದ ವಾಹನಗಳ ನಿಲುಗಡೆ ನಿಯಮ ನಗರದಲ್ಲಿ ಪಾಲನೆಯಾಗುತ್ತಿಲ್ಲ. ನಿತ್ಯವೂ ರಸ್ತೆಯ ಎರಡೂ ಬದಿಗೆ ಬೈಕ್ ಮತ್ತು
ಕಾರುಗಳನ್ನು ಪಾರ್ಕ್ ಮಾಡುತ್ತಿದ್ದು, ಸೂಚನಾ ಫಲಕಗಳು ಇದ್ದೂ ಇಲ್ಲದಂತಾಗಿವೆ.
ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ ರಸ್ತೆ, ಹೇಮು ಕಲಾನಿ ವೃತ್ತದಿಂದ ಪೋಸ್ಟಮನ್ ಸರ್ಕಲ್, ಖಡೇಬಜಾರ, ಸಮಾದೇವಿ ಗಲ್ಲಿಗಳು ಸದಾಕಾಲ ಗಿಜಿಗಿಡುತ್ತಿರುತ್ತವೆ. ಇಲ್ಲಿರುವ ಯಾವುದೇ ವಾಣಿಜ್ಯ ಸಂಕೀರ್ಣವೂ ಪಾರ್ಕಿಂಗ್‌ಗೆ ಜಾಗ ಬಿಟ್ಟಿಲ್ಲ. ಹೀಗಾಗಿ, ಎರಡೂ ಕಡೆ ವಾಹನಗಳು ನಿಲ್ಲುವುದರಿಂದ ಪದೇಪದೆ ಸಂಚಾರ ಸಿಕ್ಕು ಉಂಟಾಗುತ್ತಿದೆ. ಮಾರುತಿ ಗಲ್ಲಿ ಮತ್ತು ಗಣಪತಿ ಗಲ್ಲಿಯಲ್ಲಿ ವಿವಿಧ ಸಾಮಗ್ರಿ ಇಳಿಸುವ ಮತ್ತು ತುಂಬಿಸಿಕೊಳ್ಳುವ ಗೂಡ್ಸ್ ವಾಹನಗಳು, ಪ್ರಯಾಣಿಕರಿಗಾಗಿ ಕಾಯುವ ಆಟೋಗಳಿಂದ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.