ಅಥಣಿ ಗ್ರಾಮೀಣ:ಅಥಣಿ ತಾಲೂಕಿನ ತಾಂವಶಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ನಿಯಮಬಾಹಿರವಾಗಿ ಭರ್ತಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಉದ್ಯೋಗಾಕಾಂಕ್ಷಿಗಳು ಸೋಮವಾರ ಸಂಘದ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಉದ್ಯೋಗಾಕಾಂಕ್ಷಿ ಮುರುಗೇಶ ಲಕ್ಕೆಗೌಡರ ಮಾತನಾಡಿ, ತಾವಂಶಿ ಸಹಕಾರ ಸಂಘದಲ್ಲಿ ಖಾಲಿ ಇದ್ದ ಎಸ್‌ಡಿಸಿ ಹುದ್ದೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಸರ್ಕಾರ ಹಾಗೂ ಸಹಕಾರ ಇಲಾಖೆ ನಿಯಮ ಪಾಲಿಸಿಲ್ಲ. ನಿಯಮ ಉಲ್ಲಂಘಿಸಿ ಎಸ್‌ಡಿಸಿ ಹುದ್ದೆಗೆ ಸಂಘದ ಕಾರ್ಯದರ್ಶಿಯ ಮಗನನ್ನೇ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ ಅರ್ಹ ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕೂಡಲೇ ಈ ಕುರಿತು ಕ್ರಮ ಕೈಗೊಂಡು ನ್ಯಾಯಸಮ್ಮತವಾಗಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.