ಬೆಳಗಾವಿ: ಅಕ್ರಮವಾಗಿ ಲಾಟ್‌ರೈಟ್ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದಾಗ, ತಮ್ಮನ್ನೆ ಹೆದರಿಸಲು ಬಂದ ಅಕ್ರಮ ದಂಧೆಕೋರರ ಜೆಸಿಬಿಗೆ ಕಲ್ಲು ಎಸೆದ ಭೂ ವಿಜ್ಞಾನಿ ಬಿಂದನ್ ಪಾಟೀಲರ ವಿಡಿಯೋ ವೈರಲ್ ಆಗಿದೆ.
ಜ.3ರಂದು ತಾಲೂಕಿನ ಇನಾಮ್ ಬಡಸ ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೇ ಹಾಗೂ ರಾಜಧನವನ್ನೂ ಭರಿಸದೇ ಮಣ್ಣು ಗಣಿಗಾರಿಕೆ ಮಾಡುತ್ತಿರುವ ಮಾಹಿತಿ ಆಧರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಅಕ್ರಮ ದಂಧೆಕೋರರು ಅಧಿಕಾರಿಗಳನ್ನೇ ಹೆದರಿಸಿದಂತೆ ಮಾಡಿ, ತಮ್ಮ ಮೊಬೈಲ್‌ನಲ್ಲಿ ಇವರದ್ದೇ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದರು. ಈ ವೇಳೆ ಭೂ ವಿಜ್ಞಾನಿ ಪಾಟೀಲ ಜೆಸಿಬಿಯತ್ತ ಕಲ್ಲು ಎಸೆದಿದ್ದರು. ಗಾಜು ಪುಡಿಪುಡಿಯಾಗಿತ್ತು. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಪ್ರಕರಣ ದಾಖಲು:
ಗಡಿ ಭಾಗದ ಗ್ರಾಮಗಳಿಂದ ಲಾಟ್‌ರೈಟ್ ಮಣ್ಣನ್ನು ಅಕ್ರಮವಾಗಿ ತೆಗೆದು, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದ ಸಿಮೆಂಟ್ ಕಾರ್ಖಾನೆಗಳಿಗೆ ರವಾನಿಸುವ ದೊಡ್ಡ ಜಾಲವಿದ್ದು, ಮಾಹಿತಿ ಆಧರಿಸಿ ದಾಳಿ ಮಾಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಸಂಬಂಧ 25 ಜನರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದಾರೆ.
"
ಅಕ್ರಮ ನಡೆಯುತ್ತಿದ್ದಾಗಲೇ ನಾವು ದಾಳಿ ಮಾಡಿದ್ದೇವು. ಈ ವೇಳೆ ತಡೆದು ನಿಲ್ಲಿಸಲು ಮುಂದಾದ ನಮ್ಮನ್ನೇ ಹೆದರಿಸಲು ನೋಡಿದ್ದರು. ನಮ್ಮದೇ ವಿಡಿಯೋ ಮಾಡುತ್ತಿದ್ದರು. ಆಗ ನಾನು ಜೆಸಿಬಿಯತ್ತ ಸಹಜವಾಗಿ ಕಲ್ಲು ಎಸೆದಿದ್ದೆ. ಆ ಬಳಿಕ ಅವರು ಜೆಸಿಬಿ ಬಂದ್ ಮಾಡಿ ನಿಲ್ಲಿಸಿದ್ದರು.