ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಲಿ

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಧರಣಿಯಲ್ಲಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಅಣ್ಣಾಸಾಹೇಬ ಜೊಲ್ಲೆ, ಮುರುೇಂದ್ರಗೌಡ ಪಾಟೀಲ, ಡಾ.ವಿ.ಐ.ಪಾಟೀಲ, ಗೀತಾ ಸುತಾರ ಇತರರಿದ್ದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಧರಣಿಯಲ್ಲಿ ಮಹಾಂತೇಶ ಕವಟಗಿಮಠ ಮಾತನಾಡಿದರು. ಅಣ್ಣಾಸಾಹೇಬ ಜೊಲ್ಲೆ, ಮುರುೇಂದ್ರಗೌಡ ಪಾಟೀಲ, ಡಾ.ವಿ.ಐ.ಪಾಟೀಲ, ಗೀತಾ ಸುತಾರ ಇತರರಿದ್ದರು.
Published on

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳಗಾವಿ ನಗರ, ಗ್ರಾಮೀಣ ಘಟಕಗಳು ಅಹೋರಾತ್ರಿ ಧರಣಿ ಕೈಗೊಂಡಿವೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಆರಂಭವಾದ ಧರಣಿಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಬಿಜೆಪಿಯ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸಚಿವ ಬಿ.ನಾಗೇಂದ್ರ ತಕ್ಷಣ ರಾಜೀನಾಮೆ ನೀಡಬೇಕು. ಸರ್ಕಾರ ವಾಲ್ಮೀಕಿ ನಿಗಮ ಹಗರಣ ಮುಚ್ಚಿಹಾಕದೆ, ತನಿಖಾ ತಂಡಗಳಿಗೆ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ವಾಲ್ಮೀಕಿ ಹಗರಣದ ಆರೋಪ ಕೇಳಿಬಂದ ತಕ್ಷಣ ಸಚಿವ ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ತನಿಖೆಗೆ ಆದೇಶಿಸಿದ್ದರು. ಈಗಿನ ಮುಖ್ಯಮಂತ್ರಿ ನಾಗೇಂದ್ರರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಇದು ಆಡಳಿತ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಎಂ.ಬಿ.ಝಿರಲಿ, ಬಸವರಾಜ ಹುಂದ್ರಿ, ಡಾ.ರವಿ ಪಾಟೀಲ, ಮುರುೇಂದ್ರಗೌಡ ಪಾಟೀಲ ಇತರರಿದ್ದರು. ಧರಣಿಯಲ್ಲಿ ಭಜನೆ, ಜಾನಪದ ಕಲಾ ತಂಡಗಳ ಜತೆಗೂಡಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಬಿ.ನಾಗೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜೀನಾಮೆಗೆ ಆಗ್ರಹಿಸಿದ್ದು ವಿಶೇಷವಾಗಿತ್ತು.

ಪ್ರತಿ ದಿನ ಎರಡು ಕ್ಷೇತ್ರಕ್ಕೆ ಜವಾಬ್ದಾರಿ

ಧರಣಿಯಲ್ಲಿ ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರದ ಹಾಲಿ, ಮಾಜಿ ಶಾಸಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಬೆಳಗ್ಗೆ 10ರಿಂದ ಮರುದಿನ ಬೆಳಗ್ಗೆ 8ರವರೆಗೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೆ ಧರಣಿ ಮುಂದುವರಿಯಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
"

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ರೈತರು, ಬಡವರು, ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು. ಖುದ್ದು ಸಿಎಂ ಭ್ರಷ್ಟ ಸಚಿವರನ್ನು ರಕ್ಷಿಸುತ್ತಿದ್ದಾರೆ. ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಎದುರಿಸಬೇಕಾಗುತ್ತದೆ.

— ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಮಾಜಿ ಸದಸ್ಯ

"

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಪ್ರಮುಖ ಆರೋಪಿ ಸಚಿವ ಬಿ.ನಾಗೇಂದ್ರ ವಿರುದ್ಧ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅವರನ್ನು ಮರಳಿ ಸಚಿವರನ್ನಾಗಿ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ. ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

— ಅಣ್ಣಾಸಾಹೇಬ ಜೊಲ್ಲೆ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net