ಶೀಘ್ರದಲ್ಲೇ ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯ

ಬೆಳಗಾವಿಯಲ್ಲಿ ಬುಧವಾರ ಜರುಗಿದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿದರು. ಕೆ.ರಾಮರಾಜನ್, ಭೂಷಣ ಬೋರಸೆ ಇದ್ದಾರೆ.
ಬೆಳಗಾವಿಯಲ್ಲಿ ಬುಧವಾರ ಜರುಗಿದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಮಾತನಾಡಿದರು. ಕೆ.ರಾಮರಾಜನ್, ಭೂಷಣ ಬೋರಸೆ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಮೊಹಮ್ಮದ್ ರೋಷನ್ ಹೇಳಿಕೆ
  • ಜಿಲ್ಲಾಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆ
ಬೆಳಗಾವಿ: ಮುಂದಿನ ಎರಡು ತಿಂಗಳಲ್ಲಿ ಸೂಕ್ತ ದರ ನಿಗದಿಪಡಿಸಿ ಕಡ್ಡಾಯವಾಗಿ ಆಟೋ ರಿಕ್ಷಾಗಳು ಮೀಟರ್ ಅಳವಡಿಸಿಯೇ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ದೊರೆಯುವ ಮುಂಚೆ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಚನ್ನಮ್ಮ ವೃತ್ತ, ಕೋಟೆ ಕೆರೆ, ಅಶೋಕ ವೃತ್ತ, ನ್ಯಾಯಾಲಯ ರಸ್ತೆ, ಆರ್‌ಪಿಡಿ ವೃತ್ತ, ಶಿವಾಜಿ ಉದ್ಯಾನ ರಸ್ತೆ, ಗೋಗಟೆ ವೃತ್ತ ಸೇರಿ ಅಗತ್ಯ ಸ್ಥಳಗಳಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಕ್ರಮ ವಹಿಸಬೇಕು. ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಸೂಕ್ತ ಕ್ರಮ ಜರುಗಿಸಬೇಕು.
ಅಗತ್ಯ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಖಾಲಿ ಸ್ಥಳ ಗುರುತಿಸಿ ಆಯಾ ಮಾಲೀಕರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ನೀಡಲು ತಿಳಿಸಬೇಕು. ಕೋರ್ಟ್ ಕಾಂಪ್ಲೆಕ್ಸ್, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನೋಂದಣಾಧಿಕಾರಿ ಕಚೇರಿ, ಜಿಪಂ ಸೇರಿ ನ್ಯಾಯಾಲಯ ಆವರಣದಲ್ಲಿ ವಾಹನ ನಿಲ್ಲಿಸಲು ಸಾಕಷ್ಟು ತೊಂದರೆಯಾಗುತ್ತಿರುವ ಸಮಸ್ಯೆ ಪರಿಹರಿಸಬೇಕು ಎಂದು ನಿರ್ದೇಶಿಸಿದರು.
ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಆಟೋ ನಿಲುಗಡೆಗೆ ಅವಕಾಶ ನೀಡಬಾರದು. ನಿಗದಿತ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸುವಂತೆ ಆಟೋ ರಿಕ್ಷಾ ಸಂಘಗಳಿಗೆ ಸೂಚಿಸಬೇಕು ಎಂದರು.
ಎಸ್ಪಿ ಕೆ.ರಾಮರಾಜನ್ ಮಾತನಾಡಿ, ನಿಪ್ಪಾಣಿ-ಕೊಲ್ಲಾಪುರ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವಲ್ಲಿ ಸೂಚನಾ ಫಲಕ ಅಳವಡಿಸಬೇಕು. ಕಾಮಗಾರಿ ಮುಗಿದು ವಾಹನಗಳು ಸಂಚಾರ ಮಾಡುತ್ತಿರುವ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಿಸಬೇಕು ಎಂದರು. ಎಎಸ್ಪಿ ಆರ್.ಬಿ. ಬಸರಗಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ, ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಡಿಎಚ್‌ಒ ಈಶ್ವರ ಗಡಾದಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net