ಚನ್ನಮ್ಮನ ಘನತೆಗೆ ತಕ್ಕ ಗೌರವ ಸಲ್ಲಲಿ

ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಸವಜಯ ಮತ್ಯುಂಜಯ ಸ್ವಾಮೀಜಿ,  ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಎಂ.ವೈ.ಸೋಮನ್ನವರ, ಮಹೇಶ ಹರಕುಣಿ, ಶಿವಾನಂದ ಬೆಳಗಾವಿ ಪಾಲ್ಗೊಂಡಿದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಸವಜಯ ಮತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಎಂ.ವೈ.ಸೋಮನ್ನವರ, ಮಹೇಶ ಹರಕುಣಿ, ಶಿವಾನಂದ ಬೆಳಗಾವಿ ಪಾಲ್ಗೊಂಡಿದ್ದರು.
Published on
ಬೈಲಹೊಂಗಲ: ನಗರದ ಚನ್ನಮ್ಮ ಐಕ್ಯಸ್ಥಳದಲ್ಲಿ ನಿರ್ಮಿಸಲಾದ ರಾಕ್ ಗಾರ್ಡನ್ ಉದ್ಘಾಟನೆಯನ್ನು ತರಾತುರಿಯಲ್ಲಿ ನೆರವೇರಿಸಿರುವುದು ನಿರಾಸೆ ಉಂಟುಮಾಡಿದೆ ಎಂದು ಬಸವಜಯ ಮತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಐಕ್ಯಸ್ಥಳದ ಉದ್ಘಾಟನೆಯನ್ನು ಗೌರವಯುತವಾಗಿ, ರಾಜ್ಯಮಟ್ಟದ ಕಾರ್ಯಕ್ರಮವಾಗಿ ನೆರವೇರಿಸಬೇಕಿತ್ತು. ಇಂಥ ಐತಿಹಾಸಿಕ ಸ್ಥಳವನ್ನು ಸರಿಯಾಗಿ ಅಭಿವದ್ಧಿಪಡಿಸದೆ ತುರ್ತಾಗಿ ಉದ್ಘಾಟಿಸಿರುವುದು ಪಂಚಮಸಾಲಿ ಸಮುದಾಯ ಸೇರಿ ಎಲ್ಲ ಅಭಿಮಾನಿಗಳಿಗೆ ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂದಗಡದಲ್ಲಿ ರಾಯಣ್ಣ ಸಮಾಧಿ ಸ್ಥಳವನ್ನು ರಾಕ್ ಗಾರ್ಡನ್ ರೂಪದಲ್ಲಿ ಅಭಿವದ್ಧಿಪಡಿಸಿ, ಭವ್ಯವಾಗಿ ಲೋಕಾರ್ಪಣೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಅದೇ ಮಾದರಿಯಲ್ಲಿ ಬೈಲಹೊಂಗಲದಲ್ಲಿರುವ ಚನ್ನಮ್ಮನ ಐಕ್ಯಸ್ಥಳವನ್ನೂ ಸಮರ್ಪಕವಾಗಿ ಅಭಿವದ್ಧಿಪಡಿಸಿ, ಲೋಕಾರ್ಪಣೆಗೊಳಿಸಬೇಕು ಎಂದು ಆಗ್ರಹಿಸಿದರು.
ಕಿತ್ತೂರು ಅಭಿವದ್ಧಿ ಪ್ರಾಧಿಕಾರಕ್ಕೆ ಬರುವ ಅನುದಾನದಲ್ಲಿ ಕನಿಷ್ಠ 200 ಕೋಟಿ ರೂ. ಮೀಸಲಿಟ್ಟು, ಚನ್ನಮ್ಮನ ಜನ್ಮಸ್ಥಳ ಕಾಕತಿ, ಕಾರ್ಯಕ್ಷೇತ್ರ ಕಿತ್ತೂರು ಹಾಗೂ ಐಕ್ಯಸ್ಥಳ ಬೈಲಹೊಂಗಲನ್ನು ಸಮಗ್ರವಾಗಿ ಅಭಿವದ್ಧಿಪಡಿಸಬೇಕು. ಚನ್ನಮ್ಮನ ಹೆಸರಿನಲ್ಲಿ ಸರ್ಕಾರಿ ಸೈನಿಕ ಶಾಲೆ ಆರಂಭಿಸಿ, ರಾಷ್ಟ್ರಮಟ್ಟದ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಾಧಿಕಾರಕ್ಕೆ ಇದುವರೆಗೆ ಕೇವಲ 40ರಿಂದ 45 ಕೋಟಿ ರೂ. ಮಾತ್ರ ಬಿಡುಗಡೆಗೊಂಡಿದೆ ಎಂಬ ಮಾಹಿತಿ ಇದ್ದು, ಇತರ ಪ್ರಾಧಿಕಾರಗಳಿಗೆ ಹೆಚ್ಚಿನ ಅನುದಾನ ನೀಡಿರುವುದು ಮಲತಾಯಿ ಧೋರಣೆಯಂತೆ ಕಾಣುತ್ತಿದೆ. ಚನ್ನಮ್ಮನ ಘನತೆಗೆ ತಕ್ಕ ಗೌರವ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಎಂ.ವೈ.ಸೋಮನ್ನವರ, ಮಹೇಶ ಹರಕುಣಿ, ಶಿವಾನಂದ ಬೆಳಗಾವಿ, ಸಿದ್ದಗೌಡ ಮೊದಗಿ, ಮಲ್ಲಿಕಾರ್ಜುನ ಹುಂಬಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net