ಹವಾಮಾನ ವೈಪರೀತ್ಯಕ್ಕೆ ಮಾವು ತತ್ತರ!

ಉದುರಿದ ಹೂವು-ಕಾಯಿ
ಉದುರಿದ ಹೂವು-ಕಾಯಿ
Published on
ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಹಣ್ಣುಗಳ ರಾಜ ‘ಮಾವು’ ಹವಾಮಾನ ವೈಪರೀತ್ಯದಿಂದ ತತ್ತರಿಸಿದ್ದು, ಹೂವು ಹಾಗೂ ಕಾಯಿ ಉದುರುವಿಕೆಯಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
ಅಕಾಲಿಕ ಮಳೆ, ಬೂದು ರೋಗ, ಹವಾಮಾನ್ಯ ವೈಪರೀತ್ಯ ಕೆಲವೆಡೆ ಮಾವು ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ. ಗಿಡಗಳಲ್ಲಿ ಸಾಕಷ್ಟು ಹೂವು ಬಂದಿದ್ದರೂ ಕಾಯಿ ಕಟ್ಟದೆ ಬಿಸಿಲಿಗೆ ಬಾಡಿವೆ. ತೇವಾಂಶದ ಕೊರತೆಯಿಂದ ಹೂವು ಒಣಗಿ ಉದುರುತ್ತಿವೆ. ಇದನ್ನು ತಡೆಯಲು ವಿವಿಧ ಪೋಷಕಾಂಶ ಹಾಗೂ ಹಾರ್ಮೋನ್ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ರೈತರಲ್ಲಿ ನಷ್ಟದ ಆತಂಕ ಕಾಡುತ್ತಿದೆ.
ಒಂದು ವೇಳೆ ಮಾರ್ಚ್‌ನಲ್ಲಿ ಅಕಾಲಿಕ ಮಳೆಯಾದರೆ ಇಳುವರಿ ಸಂಪೂರ್ಣ ಕುಸಿಯಲಿದೆ. ಈ ಸಮಸ್ಯೆಯನ್ನು ಗೋವಾ, ಮಹಾರಾಷ್ಟ್ರ, ಗುಜರಾತ ರಾಜ್ಯದ ಬೆಳೆಗಾರರು ಎದುರಿಸುತ್ತಿದ್ದಾರೆ.
ಈ ಬಾರಿ ಮಾರ್ಚ್ ಕೊನೆಯ ವಾರದಿಂದ ಮಾರುಕಟ್ಟೆಗಳಿಗೆ ಅಲ್ಫಾನ್ಸೋ, ನೀಲಂ ಸೇರಿ ವಿವಿಧ ತಳಿಯ ಮಾವು ಲಗ್ಗೆ ಇಡಲಿವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಾವು ಸಿಗುವುದು ಅನುಮಾನ ಎನ್ನುತ್ತಾರೆ ಅಧಿಕಾರಿಗಳು.
ಮಾವಿನ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟಿದ್ದವು. ಕಾಯಿಗಳೂ ಕಟ್ಟಿದ್ದವು. ಆದರೆ, ಈಗ ಹೂವು-ಕಾಯಿ ಎರಡೂ ಉದುರುತ್ತಿದ್ದು, ಉತ್ಪನ್ನ ಕುಸಿಯುವ ಸಾಧ್ಯತೆ ಇದೆ ಎಂದು ಮಾವು ಬೆಳೆಗಾರ ರಾಜೇಶ ಸಾವಳೇಕರ ಹೇಳುತ್ತಾರೆ.
"

ಈ ವರ್ಷ ಮಾವಿನ ಇಳುವರಿಯಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಹವಾಮಾನ ವೈಪರೀತ್ಯದಿಂದ ವಿವಿಧ ಪ್ರದೇಶಗಳಲ್ಲಿ ಹೂವು, ಕಾಯಿ ಉದುರುತ್ತಿದ್ದು, ಬೆಳೆಗಾರರು ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಏಪ್ರಿಲ್ ಮಧ್ಯದಲ್ಲಿ ಮಾವು ಮಾರುಕಟ್ಟೆಗೆ ಪ್ರವೇಶಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net