ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಪರ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ಕಾರ್ಯಕರ್ತರು ಮೇಯರ್‌ಗೆ ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿಚಾರಣೆ ನಡೆಯಲಿರುವ ಹಿನ್ನೆಲೆ ಕರ್ನಾಟಕ ಪರವಾಗಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕನ್ನಡದಲ್ಲೇ ಪಾಲಿಕೆ ಆಡಳಿತ ನಡೆಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು.
2005ರ ಅಕ್ಟೋಬರ್ 27ರಂದು ಪಾಲಿಕೆ ಸಭೆಯಲ್ಲಿ ಮಹಾರಾಷ್ಟ್ರ ಪರವಾಗಿ ಅಂಗೀಕರಿಸಿದ ಗೊತ್ತುವಳಿಯನ್ನು ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನ ಗಡಿ ವಿವಾದ ದಾವೆಯಲ್ಲಿ ಪೂರಕ ದಾಖಲೆಯಾಗಿ ಬಳಸುತ್ತಿದೆ. ಇದು ಕರ್ನಾಟಕ ಹಿತಾಸಕ್ತಿಗೆ ಧಕ್ಕೆ ತರಬಹುದಾಗಿದೆ. ಪಾಲಿಕೆಯಲ್ಲಿ ಕರ್ನಾಟಕ ಪರವಾಗಿರುವ ಸದಸ್ಯರ ಸಂಖ್ಯೆ 55 ಆಗಿರುವುದರಿಂದ ನಿರ್ಣಯ ಅಂಗೀಕರಿಸಲು ಅಡಚಣೆಗಳಿಲ್ಲ.
ಆದಷ್ಟು ಬೇಗ ಇಂತಹ ನಿರ್ಣಯ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಯುವ ಘಟಕದ ಅಧ್ಯಕ್ಷ ಮಹೇಶ ಶೀಗಿಹಳ್ಳಿ, ಮಂಗೇಶ ಚನ್ನಿಕುಪ್ಪಿ, ಈರೇಶ ನಾಯಕ, ಲಕ್ಷ್ಮಣ ಬಾಗಡಿ, ಕಾರ್ತಿಕ ಪಾಟೀಲ, ಶಿವು ಕರಡಿಗುಡ್ಡಿ, ಸಿಂಧೂರ ನಾಗಣ್ಣವರ ಇತರರಿದ್ದರು.