ಜೆನ್ ಜೀಗಳು ಕೌಶಲ ಕಲಿಯಲಿ

ಬೆಳಗಾವಿ ವಿಟಿಯುದಲ್ಲಿ ಆರಂಭಗೊಂಡ ಎಐಸಿಟಿಇ ಐಡಿಯಾ ಲ್ಯಾಬ್ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ್ನು ಪ್ರೊ.ಟಿ.ಜಿ.ಸೀತಾರಾಂ, ಪ್ರೊ.ಎಸ್.ವಿದ್ಯಾಶಂಕರ, ಅರುಣ ಕುಮಾರ, ಪ್ರೊ.ವಿ.ಕೇಶವಮೂರ್ತಿ, ಪ್ರೊ.ಪ್ರಸಾದ ರಾಂಪುರೆ, ಪ್ರೊ.ಯು.ಜೆ.ಉಜ್ವಲ ಇತರರು ವೀಕ್ಷಿಸಿದರು.
ಬೆಳಗಾವಿ ವಿಟಿಯುದಲ್ಲಿ ಆರಂಭಗೊಂಡ ಎಐಸಿಟಿಇ ಐಡಿಯಾ ಲ್ಯಾಬ್ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ್ನು ಪ್ರೊ.ಟಿ.ಜಿ.ಸೀತಾರಾಂ, ಪ್ರೊ.ಎಸ್.ವಿದ್ಯಾಶಂಕರ, ಅರುಣ ಕುಮಾರ, ಪ್ರೊ.ವಿ.ಕೇಶವಮೂರ್ತಿ, ಪ್ರೊ.ಪ್ರಸಾದ ರಾಂಪುರೆ, ಪ್ರೊ.ಯು.ಜೆ.ಉಜ್ವಲ ಇತರರು ವೀಕ್ಷಿಸಿದರು.
Published on

ಇಡೀ ಜಗತ್ತು ನವಭಾರತದ ಜೆನ್ ಜೀಗಳತ್ತ ನೋಡುತ್ತಿದೆ. ಹೀಗಾಗಿ, ಯುವಸಮೂಹಕ್ಕೆ ಕೌಶಲ ಆಧಾರಿತ ಅವಕಾಶ ಸೃಷ್ಟಿಸುವ ಕೆಲಸವಾಗಬೇಕಿದೆ. ಇದಕ್ಕೆ ಪೂರಕವಾಗಿ ದೇಶದ ವಿದ್ಯಾರ್ಥಿಗಳು ಹೋರಾಟ, ಆಂದೋಲನಗಳಲ್ಲಿ ತೊಡಗಿಸಿಕೊಳ್ಳದೇ ಕೌಶಲ ಆಧಾರಿತ ಪರಿಣತಿ ಪಡೆಯಬೇಕಿದೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಂ ಪ್ರತಿಪಾದಿಸಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶ ಐ ವ್ಯಾಲ್ಯೂ, ಎಐಸಿಟಿಇ ಸಹಯೋಗದಲ್ಲಿ ಆರಂಭಿಸಿದ ರಿವರ್ಸ್ ಇಂಜಿನಿಯರಿಂಗ್ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಪ್ರಮಾಣಪತ್ರಕ್ಕೆ ಯಾವುದೇ ಮೌಲ್ಯ ಇರುವುದಿಲ್ಲ. ತಂತ್ರಜ್ಞಾನ ಪರಿಣತಿ ಮತ್ತು ಕೌಶಲಕ್ಕೆ ಹೆಚ್ಚಿನ ಬೆಲೆ ಸಿಗಲಿದೆ ಎಂದರು.
ದೇಶದಲ್ಲಿ ಸುಮಾರು 8 ಕೋಟಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಒಬ್ಬೊಬ್ಬ ಅಭ್ಯರ್ಥಿ ಎಂದು ಲೆಕ್ಕ ಹಾಕಿದರೂ 8 ಕೋಟಿ ಅಭ್ಯರ್ಥಿಗಳು ಬೇಕು. ಅಷ್ಟು ಪ್ರಮಾಣದಲ್ಲಿ ಕೌಶಲ ಹೊಂದಿದ ಇಂಜಿನಿಯರ್ ವಿದ್ಯಾರ್ಥಿಗಳೇ ನಮ್ಮಲ್ಲಿಲ್ಲ. ಅನೇಕರು ಇಂಜಿನಿಯರಿಂಗ್ ಕಾಲೇಜ್ ಮತ್ತು ಸೀಟುಗಳ ಸಂಖ್ಯೆ ಹೆಚ್ಚಾಯಿತು ಎಂದು ಮಾತನಾಡಿಕೊಳ್ಳುವುದು ತಪ್ಪು. ನಮ್ಮ ದೇಶಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ಇಂಜಿನಿಯರ್ ಪದವೀಧರರ ಅಗತ್ಯವಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆ ಬಳಸಿಕೊಂಡು ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು. ಎಐಸಿಟಿಇ ಮಾತೃಭಾಷೆಯಲ್ಲೇ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆ. ಜಪಾನಿಯರು, ಜರ್ಮನ್ನರು ಇಂಗ್ಲಿಷ್ ಬಳಸುವುದಿಲ್ಲ. ನಾವೇ ಅದಕ್ಕೆ ಗುಲಾಮರಾಗಿದ್ದೇವೆ ಎಂದು ಹೇಳಿದರು.
ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ರಿವರ್ಸ್ ಇಂಜಿನಿಯರಿಂಗ್ ಮತ್ತು ಎಐಸಿಟಿಇ ಐಡಿಯಾ ಲ್ಯಾಬ್ ಆರಂಭಿಸಿದ್ದೇವೆ. ದಿನದ 24 ಗಂಟೆ ಲ್ಯಾಬ್ ತೆರೆದಿರಲಿದ್ದು, ವಿದ್ಯಾರ್ಥಿಗಳು ತಮಗೆ ಅನುಕೂಲವಾಗುವ ವೇಳೆಯಲ್ಲಿ ಆಗಮಿಸಿ ಅಧ್ಯಯನ ಮಾಡಬಹುದಾಗಿದೆ. 3ಡಿ ಪ್ರಿಟಿಂಗ್ ಮಿಷನ್, ಡಿಸೈನಿಂಗ್ ತಂತ್ರಜ್ಞಾನವನ್ನು ಲ್ಯಾಬ್ ಒಳಗೊಂಡಿದೆ. ಎಲ್ಲ ವಿಭಾಗದ ವಿದ್ಯಾರ್ಥಿಗಳ ಕಲಿಕೆಗೆ ಇಲ್ಲಿ ಅವಕಾಶವಿದೆ ಎಂದರು.
ವಿಟಿಯು ಕಾರ್ಯಕಾರಿ ಪರಿಷತ್ ಸದಸ್ಯ ಪ್ರೊ.ವಿ.ಕೇಶವಮೂರ್ತಿ, ಐ ವ್ಯಾಲ್ಯೂ ಸಿಟಿಒ ಅರುಣಕುಮಾರ, ಆಡಳಿತ ವಿಭಾಗದ ಕುಲಸಚಿವ ಪ್ರೊ.ಪ್ರಸಾದ ರಾಂಪುರೆ, ಮೌಲ್ಯಮಾಪನ ಕುಲಸಚಿವ ಪ್ರೊ.ಯು.ಜೆ.ಉಜ್ವಲ್, ವಿತ್ತಾಧಿಕಾರಿ ಡಾ.ಜಿ.ಪ್ರಶಾಂತ ನಾಯಕ, ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಕೆ.ಎನ್.ಭರತ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net