ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಹಣ್ಣು, ತರಕಾರಿ ಸೇರಿ ಬೀದಿಬದಿ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಕಂದಾಯ ವಿಭಾಗದ ಅಧಿಕಾರಿಗಳು, ಗುತ್ತಿಗೆದಾರ ವಿರುದ್ಧ ಕ್ರಮಕ್ಕೆ ಶಾಸಕರು, ಸದಸ್ಯರು ಆಗ್ರಹಿಸಿದರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಭೂ ಬಾಡಿಗೆ ವಿಷಯ ಪ್ರಸ್ತಾಪಿಸಿದ ಬಿಜೆಪಿ, ಕಾಂಗ್ರೆಸ್ ಸದಸ್ಯರು ಟೆಂಡರ್ ಪಡೆದಿರುವ ಗುತ್ತಿಗೆದಾರ ನಿಯಮಬಾಹಿರವಾಗಿ ದಿನಕ್ಕೆ 150ರಿಂದ 200 ರೂ. ವರೆಗೆ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಅಂಗವಿಕಲ ವ್ಯಾಪಾರಿಗಳಿಗೆ ವಿನಾಯಿತಿ ಇದ್ದರೂ ಅವರಿಂದ ಹಣ ವಸೂಲಿ ಮಾಡಿದ್ದಾರೆ. ಈ ಕುರಿತು ಕಂದಾಯ ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸದಸ್ಯರಾದ ರವಿ ದೋತ್ರೆ, ಅಜೀಂ ಪಟವೇಗಾರ, ಶಹೀದಖಾನ್ ಪಠಾಣ ಮಾತನಾಡಿ, ಪಾಲಿಕೆ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಸಾವಿರಕ್ಕೂ ಅಧಿಕ ಬೀದಿಬದಿ ವ್ಯಾಪಾರಿಗಳಿಂದ ಬೇಕಾಬಿಟ್ಟಿಯಾಗಿ ಭೂ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಕೆಲವೆಡೆ ಭೂ ಬಾಡಿಗೆ 10ರಿಂದ 20 ರೂ. ನಿಗದಿಪಡಿಸಿದರೂ 100 ರೂ. ವಸೂಲಿ ಮಾಡುತ್ತಿದ್ದಾರೆ. ಕಡಿಮೆ ಬಿಡ್ ಮಾಡಿದವರಿಗೆ ಗುತ್ತಿಗೆ ನೀಡಿದ್ದಾರೆ. ಇದರಿಂದ ಪಾಲಿಕೆಗೆ ವಾರ್ಷಿಕ 1 ಕೋಟಿ ರೂ.ವರೆಗೆ ನಷ್ಟವಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಕಂದಾಯ ವಿಭಾಗದ ಆಯುಕ್ತೆ ರೇಷ್ಮಾ ತಾಳಿಕೋಟೆ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿ ಮಾಡಲು 1.23 ಕೋಟಿ ರೂ.ಗೆ ಕಿಶೋರ ಮೊದಗೇಕರಗೆ ಗುತ್ತಿಗೆ ನೀಡಲಾಗಿದೆ. ನೋಂದಣಿ ಮಾಡಿಕೊಂಡಿರುವ ಬೀದಿ ಬದಿ, ಅಂಗವಿಕಲ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿ ಮಾಡುವಂತಿಲ್ಲ. ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ, ಮಾಜಿ ಮೇಯರ್ ಸವಿತಾ ಕಾಂಬಳೆ ಗುತ್ತಿಗೆದಾರ ಪರ ಶಿಫಾರಸು ಪತ್ರ ಬರೆದಿದ್ದರು. ಹೀಗಾಗಿ ಗುತ್ತಿಗೆ ನೀಡುವ ವೇಳೆ ಅದನ್ನು ಪರಿಗಣಿಸಲಾಗಿದೆ. ನಿಯಮ ಮೀರಿ ವಸೂಲಿ ಮಾಡಿರುವ ಬಾಡಿಗೆ ಮರಳಿ ಪಾಲಿಕೆಗೆ ಕಟ್ಟಿಸಿಕೊಳ್ಳಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಇತರರಿದ್ದರು.