ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ನನೆಗುದಿಗೆ ಬೀಳಲು, ಕಾಮಗಾರಿ ವಿಳಂಬವಾಗಲು ಭೂ ಸ್ವಾಧೀನವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಜ್ಯ ಸರ್ಕಾರ ಸಹಕರಿಸದಿದ್ದರೆ ಯೋಜನೆಗಳು ಸ್ಥಗೀತಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಎಚ್ಚರಿಸಿದರು.
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗ, ಬಾಗಲಕೋಟೆ-ಕುಡಚಿ, ಲೋಕಾಪುರ-ಯಾದವಾಡ, ಬೆಂಗಳೂರು-ಕೋಲಾರ ಸೇರಿ ಹತ್ತಕ್ಕೂ ಅಧಿಕ ರೈಲ್ವೆ ಹೊಸ ಯೋಜನೆಗಳು ಭೂ ಸ್ವಾಧೀನ ಸಮಸ್ಯೆದಿಂದಾಗಿ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರವು ನಿಗದಿತ ಸಮಯದಲ್ಲಿ ಭೂ ಸ್ವಾಧೀನ ಮಾಡಿ ಹಸ್ತಾಂತರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳಲ್ಲಿನ ಹೊಸ ರೈಲ್ವೆ ಯೋಜನೆ ಕಾಮಗಾರಿ ನಿಗದಿತ ಸಮಯದಲ್ಲಿ ಆರಂಭಗೊಂಡು ಪೂರ್ಣಗೊಳ್ಳುತ್ತಿವೆ.ಆದರೆ, ಕರ್ನಾಟಕದಲ್ಲಿ ಭೂ ಸ್ವಾಧೀನ, ಭೂ ಪರಿಹಾರ ಇತರೆ ಸಮಸ್ಯೆದಿಂದಾಗಿ ಕಾಮಗಾರಿ ಆರಂಭಗೊಳ್ಳುತ್ತಿಲ್ಲ. ಭೂ ಸ್ವಾಧೀನ ಪರಿಹಾರದಲ್ಲಿ ಕೇಂದ್ರ ಶೇ.50ರಷ್ಟು ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಪರಿಹಾರ ನೀಡಿ ಭೂ ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ನಿರ್ಲಕ್ಷೃ ಮುಂದುವರಿಸಿದರೆ ಕಾನೂನು ಮೂಲಕವೇ ಭೂ ಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರ 2026-27ನೇ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಬೆಂಗಳೂರು ಕೇಂದ್ರದಿಂದ ತಮಿಳುನಾಡಿ ಚನ್ನೈ, ಆಂದ್ರಪ್ರದೇಶದ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಪುಣೆ ಸೇರಿ ದೇಶದ ವಿವಿಧ ಭಾಗಗಳಲ್ಲಿ ಏಳು ಹೈಸ್ಪೀಡ್ ರೈಲ್ವೆ ಸೇವೆ ಆರಂಭಗೊಳ್ಳಲಿವೆ. ಇದಕ್ಕಾಗಿ ಪರಿಶೀಲನೆ ಕಾರ್ಯ ನಡೆಯುತ್ತಿದ್ದು,ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಹೊಸ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರಿಂದ ರಾಜ್ಯಗಳ ನಡುವಿನ ಸಂಪರ್ಕ ಮತ್ತಷ್ಟು ಗಟ್ಟಿಯಾಗಲಿದೆ. ಜತೆಗೆ ವ್ಯಾಪಾರ ವಹಿವಾಟು, ಉದ್ಯೋಗ ಅವಕಾಶಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಕೇಂದ್ರ ಆರ್ಥಿಕ ಇಲಾಖೆ ಶಿಫಾರಸ್ಸು ಹಾಗೂ 16ನೇ ಹಣಕಾಸು ಆಯೋಗದ ಅನ್ವಯ ಕೇಂದ್ರದಿಂದ ಕರ್ನಾಟಕಕ್ಕೆ 63 ಸಾವಿರ ಕೋಟಿ ರೂ. ಅನುದಾನ ಹರಿದು ಬರಲಿದೆ. ಕಳೆದ ವರ್ಷ 55 ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ನೀಡಿತ್ತು. ರಾಜ್ಯದ ತೆರಿಗೆ ಸಂಗ್ರಹದಲ್ಲಿ ಶೇ.41ರಷ್ಟು ತೆರಿಗೆ ಹಣ ವಾಪಸ್ ರಾಜ್ಯಕ್ಕೆ ನೀಡುತ್ತಿದೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಾಜಿ ಸಂಸದ ರಮೇಶ ಕತ್ತಿ, ಎಂ.ಬಿ.ಝಿರಲಿ, ಹಣಮಂತ ಕೊಂಗಾಲಿ, ಡಾ.ರವಿ ಪಾಟೀಲ, ಮುರೇಂದ್ರಗೌಡ ಪಾಟೀಲ ಇತರರಿದ್ದರು.
..............
ಬಾಕ್ಸ್
ಮೆಟ್ರೋ ದರ ಹೆಚ್ಚಳ ಕೇಂದ್ರದ ಪಾತ್ರವಿಲ್ಲ
ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಮೆಟ್ರೋ ಆಡಳಿತ ನಡೆಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಹೀಗಾಗಿ ಟಿಕೆಟ್ ದರ ಹೆಚ್ಚಳ ವಿಚಾರದಲ್ಲಿ ಕೇಂದ್ರಕ್ಕೆ ಸಂಬಂಧಿಸಿದಲ್ಲ. ಟಿಕೆಟ್ ದರ ಹೆಚ್ಚಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
..............
ಬಾಕ್ಸ್
ರೈಲ್ವೆ ಇಲಾಖೆಯಲ್ಲಿ ಕನ್ನಡ ಕಡ್ಡಾಯ
ರೈಲ್ವೆ ಇಲಾಖೆ ಆಡಳಿತದಲ್ಲಿ ಇಂಗ್ಲೀಷ್, ಹಿಂದಿಯ ಜತೆಗೆ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರೈಲ್ವೆ ಇಲಾಖೆಯ ಆಡಳಿತ ಬಡ್ತಿ, ನೇಮಕಾತಿ ಹಾಗೂ ಆದೇಶ ಸೇರಿ ಎಲ್ಲವೂ ಕನ್ನಡದಲ್ಲಿ ಅವಕಾಶ ನೀಡಲಾಗುತ್ತಿದೆ. ಕನ್ನಡ ಭಾಷೆ ನಿರ್ಲಕ್ಷೃಸಿಸುವ ಮಾತೆಯೇ ಇಲ್ಲ. ಒಂದು ವೇಳೆ ರೈಲ್ವೆ ಇಲಾಖೆಯಲ್ಲಿ ಕನ್ನಡ ನಿರ್ಲಕ್ಷೃಸಿರುವುದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವ ವಿ.ಸೋಮಣ್ಣ ಹೇಳಿದರು.