ಬೆಳಗಾವಿ: ಚಳಿಗಾಲದ ಅಧಿವೇಶನ ಮುಗಿಯುವುದ ರೊಳಗೆ ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ಕೇಂದ್ರಗಳನ್ನಾಗಿಸುವ ನಿರ್ಣಯ ಕೈಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿಧಾನ ಮಂಡಳ ಅಧಿವೇಶನದಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಸೋಮವಾರ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಜಿಲ್ಲೆಯಾಗುವ ಸಂಬಂಧ ಮಠಾಧೀಶರು ಮತ್ತು ಹೋರಾಟ ಸಮಿತಿ ಸದಸ್ಯರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆಗಿನ ಸರ್ಕಾರಗಳು ರಚಿಸಿದ್ದ ಎಲ್ಲ ಆಯೋಗಗಳು ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಲು ಯೋಗ್ಯ ಇವೆ ಎಂದು ಹೇಳಿದ್ದರು. ಜಿಲ್ಲೆ ಪುನರ್ವಿಂಗಡಣೆಗಾಗಿ 40 ವರ್ಷಗಳಿಂದ ಹೋರಾಟ ನಡೆದಿದೆ. ಶೀಘ್ರ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಅಂತಿಮ ನಿರ್ಣಯ ಮಾಡುವಂತೆ ಸಭಾಧ್ಯಕ್ಷರ ಮೂಲಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.