ಚನ್ನಮ್ಮ ವೃತ್ತ ಪ್ರತಿಭಟನೆ ಮುಕ್ತ?

ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆದಾಗ ಸೇರಿರುವ ಜನಸ್ತೋಮ.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆದಾಗ ಸೇರಿರುವ ಜನಸ್ತೋಮ.
Published on

ಪ್ರಮುಖ ಮುಖ್ಯಾಂಶಗಳು

  • ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ
  • ಸರ್ಕಾರಕ್ಕೆ ಪೂರಕ ಪ್ರಸ್ತಾವ ಸಲ್ಲಿಸಿದ ಪೊಲೀಸರು
ಬೆಳಗಾವಿ: ಪ್ರತಿಭಟನೆ, ಮೆರವಣಿಗೆ, ಉತ್ಸವ ಏನೇ ಇರಲಿ, ಅದು ನಗರದ ಚನ್ನಮ್ಮ ವೃತ್ತದಿಂದಲೇ ಆರಂಭಗೊಳ್ಳಬೇಕು. ಇದು ಮೊದಲಿನಿಂದಲೂ ನಡೆದು ಬಂದ ರೂಢಿ. ಸಣ್ಣ ಪ್ರತಿಭಟನೆಯಿಂದ ಹಿಡಿದು ಬೃಹತ್ ಪ್ರತಿಭಟನೆಯವರೆಗೆ ಎಲ್ಲದಕ್ಕೂ ಕಿತ್ತೂರು ಚನ್ನಮ್ಮ ವೃತ್ತವೇ ಬೇಕು. ಆದರೆ ಈಚೆಗೆ ನಗರದ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಬೆಳೆದಂತೆ ಇಲ್ಲಿನ ಪ್ರತಿಭಟನೆಗಳಿಂದಾಗಿ ಇಡೀ ನಗರದ ಸಂಚಾರ ವ್ಯವಸ್ಥೆಯೇ ಆಯೋಮಯವಾಗುತ್ತಿದೆ. ಜನರು ಸಂಚಾರ ದಟ್ಟಣೆಯಿಂದ ಪರಿತಪಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಈ ವೃತ್ತವನ್ನೇ ಪ್ರತಿಭಟನೆ ಮುಕ್ತ ಮಾಡುವ ಚಿಂತನೆ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಗೆ ಸಣ್ಣದೊಂದು ಮನವಿ ಸಲ್ಲಿಸಲು ಹತ್ತಾರು ಜನ ಬರಬೇಕಿದ್ದರೂ, ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು, ಕೆಲಹೊತ್ತು ವೃತ್ತದಲ್ಲಿ ಪ್ರತಿಭಟಿಸಿ ಬಳಿಕ ರ‌್ಯಾಲಿ ಮೂಲಕ ಡಿಸಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸುತ್ತಾರೆ. ಕೇವಲ ಹದಿನೈದು ನಿಮಿಷಕ್ಕಿಂತ ಹೆಚ್ಚು ಕಾಲ ಚನ್ನಮ್ಮ ವೃತ್ತ ಬಂದ ಆದಲ್ಲಿ, ಅದು ಇಡೀ ನಗರದ ಸಂಚಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ.
ಪುನಃ ವಾಹನಗಳ ಸಂಚಾರ ಸುಗಮ ಸ್ಥಿತಿಗೆ ಬರಲು ಒಂದು ಗಂಟೆ ಬೇಕು. ಚನ್ನಮ್ಮ ವೃತ್ತ ಬೆಳಗಾವಿಯ ಹೃದಯಭಾಗವಾಗಿದ್ದು, ಪ್ರಮುಖ ಪ್ರದೇಶಗಳ ಸಂಪರ್ಕ ಕೊಂಡಿಯಾಗಿದೆ. ಈಚೆಗೆ ನಗರದ ಜನತೆ ತುಂಬಾ ತೊಂದರೆ ಅನುಭವಿಸುತ್ತಿದ್ದು, ಸಂಚಾರ ನಿರ್ವಹಣೆ ಮಾಡಲು ಪೊಲೀಸರು ಹೈರಾಣಾಗುತ್ತಿದ್ದಾರೆ. ಹೀಗಾಗಿ, ಇದಕ್ಕೆ ಪರಿಹಾರ ಹುಡಕಲು ಯೋಜನೆ ರೂಪಿಸಲಾಗಿದೆ.
ಈಗಾಗಲೇ ನಗರ ಪೊಲೀಸ್ ಆಯುಕ್ತರು ಹೊಸ ವ್ಯವಸ್ಥೆ ಮಾಡಲು ಮುಂದಾಗಿದ್ದು, ಪೂರಕ ಪ್ರಸ್ತಾವ ಸಿದ್ಧಗೊಂಡಿದೆ. ಯಾವುದೇ ಪ್ರತಿಭಟನೆಗಳಿಗೆ ಚನ್ನಮ್ಮ ವೃತ್ತದಲ್ಲಿ ಅವಕಾಶ ಕೊಡದೇ, ಸರದಾರ್ ಮೈದಾನದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು, ಅಲ್ಲಿಂದ ಕಾಕತಿವೇಸ್ ಕ್ರಾಸ್, ನಗರ ಕೇಂದ್ರ ಗ್ರಂಥಾಲಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪುವ ನಿಟ್ಟಿನಲ್ಲಿ ನೂತನ ಮಾರ್ಗ ರೂಪಿಸಲು ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಬಳಿಯೂ ಪ್ರತಿಭಟನಾ ಸ್ಥಳ ನಿಗದಿ ಮಾಡಿದ್ದಾರೆ. ಆದರೆ, ಇದಕ್ಕೆ ಜಿಲ್ಲೆಯ ಎಲ್ಲ ಶಾಸಕರು ಒಪ್ಪಿ, ಕೆಡಿಪಿ ಸಭೆಯಲ್ಲಿ ಸರ್ವಾನುಮತದ ಠರಾವು ಮಂಡಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮುಂದೆ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನಿಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈಗಾಗಲೇ ಚನ್ನಮ್ಮ ವೃತ್ತದ ಮೂಲಕ ಓಡಾಡುವ ವಾಹನಗಳ ಸಂಖ್ಯೆ, ಪ್ರತಿಭಟನೆಗಳು ನಡೆದಾಗ ಎಷ್ಟು ವ್ಯಾಪ್ತಿಯವರೆಗೂ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ಭಾಗದಲ್ಲಿರುವ ಆಸ್ಪತ್ರೆಗಳೆಷ್ಟು, ಅವುಗಳಿಗೆ ಅಂಬ್ಯುಲೆನ್ಸ್ ತಲುಪಲು ಆಗುತ್ತಿರುವ ವಿಳಂಬ ಎಲ್ಲವನ್ನೂ ಒಳಗೊಂಡು ಸುದೀರ್ಘ ವರದಿಯೊಂದನ್ನು ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪಿಗೆ ಸಿಕ್ಕಲ್ಲಿ ಸರ್ಕಾರಕ್ಕೆ ಸಾಧಕ-ಬಾಧಕಗಳ ವರದಿಯನ್ನೂ ಸಲ್ಲಿಸಿ ಅನುಮತಿ ಪಡೆಯಲಿದ್ದಾರೆ.

ಬೆಳಗಾವಿ ನಗರದ ಸಂಚಾರ ದಟ್ಟಣೆ ಗಮನದಲ್ಲಿ ಇಟ್ಟುಕೊಂಡು ಚನ್ನಮ್ಮ ವೃತ್ತವನ್ನು ಪ್ರತಿಭಟನೆ ಮುಕ್ತ ಮಾಡಲು ಚಿಂತಿಸಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಎಲ್ಲ ಶಾಸಕರು ನಿರ್ಣಯ ಕೈಗೊಳ್ಳಬೇಕಿದೆ. ಮುಂದಿನ ಕೆಡಿಪಿ ಸಭೆಯಲ್ಲಿ ಈ ಕುರಿತು ಪ್ರಸ್ತಾವ ಸಲ್ಲಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net