ನಿಪ್ಪಾಣಿ: ಮಹಾರಾಷ್ಟ್ರದ ಕಾಳಮ್ಮವಾಡಿ ಅಣೆಕಟ್ಟೆಯಿಂದ ವೇದಗಂಗಾ ನದಿಗೆ ಬಿಡಲಾಗುತ್ತಿರುವ ನೀರಿನ ಹರಿವು ಹೆಚ್ಚಿಸುವಂತೆ ಶಾಸಕಿ ಶಶಿಕಲಾ ಜೊಲ್ಲೆ ಆಗ್ರಹಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳು ಮತ್ತು ರೈತರೊಂದಿಗೆ ಸಂವಾದ ನಡೆಸಿ, ನೀರಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ಈ ಕುರಿತು ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ನಿಪ್ಪಾಣಿ ಭಾಗದ ರೈತರು ನೀರಿನ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ವೇದಗಂಗಾ ನದಿಪಾತ್ರದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೃಷಿಗೆ ತೀವ್ರ ಹಾನಿಯಾಗುತ್ತಿದೆ. ಕಾಳಮ್ಮವಾಡಿ ಅಣೆಕಟ್ಟಿನಿಂದ ನೀರು ಸಮರ್ಪಕವಾಗಿ ಹರಿಯದಿರುವುದರಿಂದ ತಾಂತ್ರಿಕ ಅಡಚಣೆಗಳು ಉಂಟಾಗುತ್ತಿವೆ ಎಂದು ಮನವರಿಕೆ ಮಾಡಿದ್ದಾರೆ.
ತಕ್ಷಣದ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಹಾಲಶುಗರ್ ಅಧ್ಯಕ್ಷ ಎಂ.ಪಿ.ಪಾಟೀಲ, ನಿರ್ದೇಶಕ ಪ್ರಕಾಶ ಶಿಂಧೆ, ರಾಜು ಗುಂಡೆಷಾ, ಜಯವಂತ ಭಾಟಲೆ, ಎಸ್.ಎಸ್.ಢವನೆ, ಸಮಿತ ಸಾಸನೆ, ರಾಜು ಕಾನಡೆ ಇತರರಿದ್ದರು.