ಹಲಗಾ-ಮಚ್ಛೆ ಬೈಪಾಸ್‌ನಲ್ಲಿನ ಕಚ್ಚಾ ರಸ್ತೆಯಲಿ ಪ್ರತಿ ವಾಹನ ದಾಟಿದಾಗಲೂ ಈ ರೀತಿ ಧೂಳು ಆವರಿಸಿಕೊಳ್ಳುತ್ತಿದೆ.
Published on:
Copied
Follow Us
ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ. ಮಹತ್ವದ ಮೇಲ್ಸೇತುವೆಗಳ ನಿರ್ಮಾಣದ ಜತೆಗೆ ಎರಡೂ ಕಡೆ ಕಾಂಕ್ರಿಟ್ ರಸ್ತೆ ನಿರ್ಮಾಣವೂ ಪ್ರಗತಿಯಲ್ಲಿದೆ. ಈ ಕಾಮಗಾರಿಯ ವಾಹನಗಳ ಓಡಾಟಕ್ಕಾಗಿ ಮಾಡಿಕೊಂಡಿರುವ ವಿಶಾಲವಾದ ಕಚ್ಚಾ ರಸ್ತೆಯಲ್ಲಿ ಇತರ ವಾಹನಗಳೂ ಲಗ್ಗೆಯಿಟ್ಟಿದ್ದರಿಂದ ಏಳುತ್ತಿರುವ ಧೂಳಿಗೆ ಅಕ್ಕಪಕ್ಕದ ನೂರಾರು ಎಕರೆಯಲ್ಲಿನ ಕೃಷಿ ಬೆಳೆ ಬಸವಳಿದಿವೆ.
ಈ ಭಾಗದಲ್ಲಿ ರೈತರು ಹೆಚ್ಚಾಗಿ ಸಾಸಿವೆ, ಹೂಕೋಸು, ಎಲೆಕೋಸು, ನವಿಲಕೋಲು, ಚನ್ನಂಗಿ, ಟೊಮ್ಯಾಟೋ, ಸಾಸಿವೆ, ಕ್ಯಾರೆಟ್, ಗೋಧಿ, ಜೋಳ, ಸಣ್ಣ ವಟಾಣಿ ಜತೆಗೆ ಮೂಲಂಗಿ, ಕೋತಂಬರಿ, ಮೆಂತೆಯಂತಹ ಸೊಪ್ಪುಗಳನ್ನೂ ಬೆಳೆಯುತ್ತಿದ್ದಾರೆ. ಆದರೆ, ಕಚ್ಚಾ ರಸ್ತೆಯಲ್ಲಿ ನಿರಂತರವಾಗಿ ಲಾರಿಗಳು ಸಂಚರಿಸುತ್ತಿರುವುದರಿಂದ ಆಳೆತ್ತರದವರೆಗೂ ಏಳುವ ಧೂಳು, ನೇರವಾಗಿ ಬೆಳೆಗಳ ಮೇಲೆ ಬೀಳುತ್ತಿದೆ.
ದ್ಯುತಿಸಂಶ್ಲೇಷಣೆ ಕುಂಠಿತ: ಬಹುತೇಕ ಬೆಳೆಗಳಲ್ಲಿ ಹೂವು ಬಂದಿಲ್ಲ. ಹೂವು ಬಂದಲ್ಲಿ, ದ್ಯುತಿ ಸಂಶ್ಲೇಷಣೆ ಕ್ರಿಯೆ ಆಗುತ್ತಿಲ್ಲ. ಹೀಗಾಗಿ ಟೊಮ್ಯಾಟೋ, ಸಾಸಿವೆ, ಚನ್ನಂಗಿ, ಮೆಣಸಿನಕನಾಯಿ, ಸಣ್ಣ ವಟಾಣಿ ಕೈ ಹಿಡಿದಿಲ್ಲ. ಹಚ್ಚ ಹಸಿರಾಗಿ ಕಾಣಬೇಕಾದ ಬೆಳೆಗಳು ಧೂಳಿನಿಂದ ಕಂದು ಬಣ್ಣಕ್ಕೆ ತಿರುಗಿದೆ.
ಹಲಗಾ ಕಡೆಯಿಂದ ಖಾನಾಪುರ ಹಾಗೂ ಖಾನಾಪುರ ಕಡೆಯಿಂದ ಪುಣೆ-ಬೆಂಗಳೂರು ಹೆದ್ದಾರಿ ಬರಬೇಕಾದವರು, ಬೆಳಗಾವಿ ನಗರ ತಪ್ಪಿಸಲು ಇದೇ ಮಾರ್ಗದಲ್ಲಿ ಸಾಗಿ, ಯಳ್ಳೂರ-ದೇಸೂರ ಮೂಲಕ ಸಂಚರಿಸುತ್ತಿದ್ದಾರೆ. ಪೀರನವಾಡಿ, ಮಚ್ಛೆ ಹಾಗೂ ವಿಟಿಯು ಕಡೆ ಹೋಗುವವರು ಮತ್ತು ಬರುವವರು ಇದೇ ಮಾರ್ಗ ಬಳಸುತ್ತಿದ್ದಾರೆ. ಹೀಗಾಗಿ ಲಾರಿ ಮಾತ್ರವಲ್ಲ, ಕಾರು ಸಹಿತ ಗೂಡ್ಸ್ ವಾಹನಗಳೆಲ್ಲ ಓಡಾಡುತ್ತಿವೆ. ಬೈಪಾಸ್‌ಗಾಗಿ ಜಮೀನು ಕಳೆದುಕೊಂಡು ಅಳಿದುಳಿದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೂ ಅದಕ್ಕೂ ಈಗ ಧೂಳು, ಕಲ್ಲು ಹಾಕಿದಂತಾಗಿದೆ.
"
ಧೂಳಿನಿಂದ ಸಾಕಾಗಿ ಹೋಗಿದೆ. ಅಲ್ವಸ್ವಲ್ಪ ಸಣ್ಣ ವಟಾಣಿಗೂ ಧೂಳು ಮೆತ್ತಿಕೊಂಡಿದೆ. ಅದನ್ನು ತೊಳೆದರೆ ಕೊಳೆಯುತ್ತಿದೆ. ಹೀಗಾಗಿ ಸಂಪೂರ್ಣ ನಷ್ಟವಾಗಿದೆ. ರಸ್ತೆಗೆ ನೀರು ಹೊಡೆಯುವಂತೆ ಗುತ್ತಿಗೆದಾರರಿಗೆ ಸಾಕಷ್ಟು ಸಲ ಹೇಳಿದ್ದೇವೆ. ಆದರೂ ಸ್ಪಂದಿಸುತ್ತಿಲ್ಲ.