ಈಗಾಗಲೇ ನಗರ ಪೊಲೀಸ್ ಆಯುಕ್ತರು ಹೊಸ ವ್ಯವಸ್ಥೆ ಮಾಡಲು ಮುಂದಾಗಿದ್ದು, ಪೂರಕ ಪ್ರಸ್ತಾವ ಸಿದ್ಧಗೊಂಡಿದೆ. ಯಾವುದೇ ಪ್ರತಿಭಟನೆಗಳಿಗೆ ಚನ್ನಮ್ಮ ವೃತ್ತದಲ್ಲಿ ಅವಕಾಶ ಕೊಡದೇ, ಸರದಾರ್ ಮೈದಾನದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು, ಅಲ್ಲಿಂದ ಕಾಕತಿವೇಸ್ ಕ್ರಾಸ್, ನಗರ ಕೇಂದ್ರ ಗ್ರಂಥಾಲಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪುವ ನಿಟ್ಟಿನಲ್ಲಿ ನೂತನ ಮಾರ್ಗ ರೂಪಿಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿಯೂ ಪ್ರತಿಭಟನಾ ಸ್ಥಳ ನಿಗದಿ ಮಾಡಿದ್ದಾರೆ. ಆದರೆ, ಇದಕ್ಕೆ ಜಿಲ್ಲೆಯ ಎಲ್ಲ ಶಾಸಕರು ಒಪ್ಪಿ, ಕೆಡಿಪಿ ಸಭೆಯಲ್ಲಿ ಸರ್ವಾನುಮತದ ಠರಾವು ಮಂಡಿಸಿ ಸರ್ಕಾರಕ್ಕೆ ಸಲ್ಲಿಸಬೇಕಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮುಂದೆ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನಿಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈಗಾಗಲೇ ಚನ್ನಮ್ಮ ವೃತ್ತದ ಮೂಲಕ ಓಡಾಡುವ ವಾಹನಗಳ ಸಂಖ್ಯೆ, ಪ್ರತಿಭಟನೆಗಳು ನಡೆದಾಗ ಎಷ್ಟು ವ್ಯಾಪ್ತಿಯವರೆಗೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿರುವ ಆಸ್ಪತ್ರೆಗಳೆಷ್ಟು, ಅವುಗಳಿಗೆ ಅಂಬ್ಯುಲೆನ್ಸ್ ತಲುಪಲು ಆಗುತ್ತಿರುವ ವಿಳಂಬ ಎಲ್ಲವನ್ನೂ ಒಳಗೊಂಡು ಸುದೀರ್ಘ ವರದಿಯೊಂದನ್ನು ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಒಪ್ಪಿಗೆ ಸಿಕ್ಕಲ್ಲಿ ಸರ್ಕಾರಕ್ಕೆ ಸಾಧಕ-ಬಾಧಕಗಳ ವರದಿಯನ್ನೂ ಸಲ್ಲಿಸಿ ಅನುಮತಿ ಪಡೆಯಲಿದ್ದಾರೆ.