ಬೆಳಗಾವಿ ತಾಲೂಕಿನ ಹಲಗಾ ಗ್ರಾಪಂ ಕಟ್ಟಡದ ಮೇಲೆ ಅಳವಡಿಸಿರುವ ಸೈರನ್.
Published on:
Copied
Follow Us
ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ರಾಜ್ಯದ ಗಮನ ಸೆಳೆಯುವ ಮಹತ್ವದ ನಿರ್ಣಯಗಳಾಗುತ್ತಿದ್ದಾಗಲೇ, ಈ ಸೌಧವಿರುವ ಹಲಗಾ, ದೇಶದ ಮೂರನೇ ಡಿಜಿಟಲ್ ಡೆಟಾಕ್ಸ್ ಗ್ರಾಮವಾಗುವತ್ತ ಮಹತ್ವದ ನಿರ್ಣಯ ಕೈಗೊಂಡಿದೆ.
ಇವತ್ತು ಮೊಬೈಲ್ ಮತ್ತಿತರೆ ಗ್ಯಾಜೆಟ್ ಇಲ್ಲದೇ ಜೀವನ ಇಲ್ಲ. ಹಳ್ಳಿಗಳಲ್ಲಿ ಸಂಜೆ ಪ್ರೈಮ್ ಟೈಮ್‌ನಲ್ಲಿ ಟೆಲಿವಿಜನ್ ಸೀರಿಯಲ್ ಇರಲೇಬೇಕು. ಆದರೆ, ಈ ಪ್ರೈಮ್ ಟೈಮ್‌ದಲ್ಲೇ ಎರಡು ಗಂಟೆಗಳ ಕಾಲ ಮೊಬೈಲ್ ಮತ್ತು ಟಿವಿಯಂತಹ ಎಲ್ಲ ಗ್ಯಾಜೆಟ್ ಬಂದ್ ಮಾಡುವ ಮಹತ್ವದ ನಿರ್ಧಾರ ಹಲಗಾ ಗ್ರಾಮಸ್ಥರು ಕೈಗೊಂಡಿದ್ದಾರೆ.
ನಿತ್ಯ ಸಂಜೆ 7ರಿಂದ 9ರವರೆಗೆ ಗ್ರಾಮದಲ್ಲಿ ಮೊಬೈಲ್, ಟಿವಿ ನಿರ್ಬಂಧಿಸಿ, ಗ್ರಾಪಂ ನೇತೃತ್ವದಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕಾಗಿ ಗ್ರಾಪಂ ಕಟ್ಟಡ ಮೇಲೆ ಸೈರನ್ ಅಳವಡಿಸಿದ್ದು, ಸಂಜೆ 7ಕ್ಕೆ ಸೈರನ್ ಮೊಳಗಿದ ತಕ್ಷಣ ಗ್ರಾಮಸ್ಥರು ಮೊಬೈಲ್ ಸೈಲೆಂಟ್ ಮಾಡಿಡಬೇಕು. ಟಿವಿ ಬಂದ್ ಮಾಡಬೇಕು.
9ಕ್ಕೆ ಪುನಃ ಸೈರನ್ ಆದಾಗ, ಬಳಕೆ ಮುಂದುವರಿಸಬಹುದು. ಬುಧವಾರದಿಂದ ಔಪಚಾರಿಕವಾಗಿ ಡಿಜಿಟಲ್ ಡೆಟಾಕ್ಸ್ ಶುರುವಾಗಿದೆ. ಗ್ರಾಮಸ್ಥರಿಗೆ ರೂಢಿಯಾದ ಬಳಿಕ ಅಧಿಕೃತ ದಿನಾಂಕ ನಿಗದಿ ಮಾಡಿ, ಅಂದಿನಿಂದ ತಪ್ಪಿದವರಿಗೆ ದಂಡ ಹಾಕುವಂತಹ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಮಕ್ಕಳ ಭವಿಷ್ಯಕ್ಕಾಗಿ ನಿರ್ಧಾರ: ಹಲಗಾ ಬೆಳಗಾವಿ ತಾಲೂಕಿನ ದೊಡ್ಡ ಗ್ರಾಮ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೊಂದೇ ಗ್ರಾಮದಲ್ಲಿದ್ದಾರೆ. ಈ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
"
ಮಹಾರಾಷ್ಟ್ರದ ಎರಡು ಗ್ರಾಮಗಳನ್ನು ನೋಡಿ ನಾವೂ ಅನುಸರಿಸಲು ಮುಂದಾಗಿದ್ದೇವೆ. ಆರಂಭದಲ್ಲಿ ಜನರಿಗೆ ಕಷ್ಟವಾಗುತ್ತಿದೆ. ತಿಳಿಸಿ ಹೇಳುತ್ತಿದ್ದೇವೆ. ಮಕ್ಕಳ ಭವಿಷ್ಯಕ್ಕಾಗಿ ಮನೆಯವರೆಲ್ಲ ಡಿಜಿಟಲ್ ನಿರ್ಬಂಧ ಹಾಕಿಕೊಳ್ಳಲೇಬೇಕಿದ್ದು, ಇದರಲ್ಲಿ ಖಂಡಿತ ಯಶಸ್ವಿಯಾಗುತ್ತೇವೆ.